

ರಾಮನಗರ: ರಾಜ್ಯದ ಅಭಿವೃದ್ಧಿ ಹಾಗೂ ಜಿಲ್ಲೆಯ ಸಮಸ್ತ ಜನತೆಗೆ ಒಳಿತಾಗಲಿ ಎಂಬ ಕಾರಣಕ್ಕೆ ಡಿ.16ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ಆಯೋಜಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಶ್ರೀನಿವಾಸ ಕಲ್ಯಾಣೋತ್ಸವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಅಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬವೂ ಆಗಿದೆ. ಕಾರ್ಯಕ್ರಮ ಪಕ್ಷಾತೀತವಾಗಿರಲಿದ್ದು, ಎಲ್ಲರನ್ನೂ ಆಹ್ವಾನಿಸಲಿದ್ದೇವೆ. ಅತಿಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು ರಾಮನಗರ ಸೇರಿ ಪಕ್ಕದ ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರಿನಿಂದಲೂ ಜನ ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಶ್ರೀನಿವಾಸ ಕಲ್ಯಾಣಕ್ಕೂ ಮುನ್ನ ಮಧ್ಯಾಹ್ನ ವೇಳೆಗೆ ತಿರುಪತಿ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಜಾನಪದ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಇದು ಧಾಮಿರ್ಕ ಕಾರ್ಯಕ್ರಮವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರು, ನಮ್ಮ ಅಜ್ಜಿ ಚನ್ನಮ್ಮ, ಎಚ್ಡಿಕೆ ಹಾಗೂ ಶಾಸಕಿ ಅನಿತಾ ಹೊರತಾಗಿ ಬೇರೆ ಯಾರೂ ವೇದಿಕೆಯಲ್ಲಿ ಇರಲ್ಲ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ದೇವರ ದರ್ಶನ ಹಾಗೂ ಊಟದ ವ್ಯವಸ್ಥೆ ಇರುತ್ತದೆ ಎಂದರು.