

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತೀಯ ಸನಾತನ ಸಂಸ್ಕೃತಿಯ ಪ್ರಚಾರದ ನಿಮಿತ್ತವಾಗಿ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ವಿಶ್ವದ ವಿವಿಧ ದೇಶಗಳಲ್ಲಿ ಶ್ರೀ ಕೃಷ್ಣನ ಮಂದಿರ ಸ್ಥಾಪಿಸಿದ್ದು, ಅಮೆರಿಕದ ಡಲ್ಲಾಸ್ ನಗರದಲ್ಲಿರುವ ಪುತ್ತಿಗೆ ಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲು ಉಡುಪಿ ಶ್ರೀಕೃಷ್ಣನ ಮಾದರಿಯ ಸುಂದರ ಮೂರ್ತಿ ಸಿದ್ಧಗೊಂಡಿದೆ.
ಮುಖ್ಯಪ್ರಾಣ ದೇವರ ಸಹಿತವಾಗಿ ಕಡೂರಿನ ಶಿಲ್ಪಿ ತೀರ್ಥರಾಜ್ ತಂಡದವರು ಕೆತ್ತಿ, ತಯಾರಿಸಿದ ಈ ಬೃಹತ್ ಮೂರ್ತಿಯನ್ನು ಉಡುಪಿಯ ಗೀತಾ ಮಂದಿರದಲ್ಲಿ ಜುಲೈ 4ರಂದು ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಪರ್ಯಾಯ ಸುಗುಣೇಂದ್ರ ಶ್ರೀಗಳಿಗೆ ಹಸ್ತಾಂತರಿಸಿದರು.
ಶ್ರೀಮಠದ ಅಂತಾರಾಷ್ಟ್ರೀಯ ಕಾಯದರ್ಶಿ ಪ್ರಸನ್ನ ಆಚಾರ್ಯ ಸ್ವಾಗತಿಸಿದರು. ಅಮೆರಿಕದ ಡಲ್ಲಾಸ್ ನಗರದ ಪುತ್ತಿಗೆ ಶಾಖಾ ಮಠದ ಪ್ರಧಾನ ಅರ್ಚಕ ವಾದಿರಾಜ ಭಟ್ ಕುಕ್ಕೆಹಳ್ಳಿ ವಂದಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಮಠದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.
ನಮ್ಮ ಚತುರ್ಥ ಪೂಜಾ ಪರ್ಯಾಯ ಮುಗಿದ ಬಳಿಕ ಈ ಮೂರ್ತಿಯನ್ನು ಅಮೆರಿಕದ ಡಲ್ಲಾಸ್ ನಗರದಲ್ಲಿರುವ ನಮ್ಮ ಪುತ್ತಿಗೆ ಮಠದಲ್ಲಿ ವಿದ್ಯುಕ್ತವಾಗಿ ಪ್ರತಿಷ್ಠಾಪನೆ ಮಾಡಲಾಗುವುದು. ಅಲ್ಲಿಯವರೆಗೆ ಶ್ರೀಕೃಷ್ಣ ಮುಖ್ಯಪ್ರಾಣನ ಈ ಮೂರ್ತಿಗಳು ಗೀತಾ ಮಂದಿರದಲ್ಲಿಯೇ ಇರಲಿದೆ. ಸನಾತನ ಧರ್ಮ ಪ್ರಸರಣದ ನಮ್ಮ ಉದ್ದೇಶಿತ ಸಂಕಲ್ಪದ ಮತ್ತೊಂದು ಹೆಜ್ಜೆ ಪೂರ್ಣಗೊಂಡಿದೆ. | ಸುಗುಣೇಂದ್ರ ಶ್ರೀ. ಪರ್ಯಾಯ ಪುತ್ತಿಗೆ ಮಠ