ಮಂಜುನಾಥನ ಮಡಿಲಲ್ಲಿ ಕೃಷ್ಣರ ತುಂಟಾಟ, 20ಕ್ಕೂ ಅಧಿಕ ಹಸುಗೂಸುಗಳನ್ನು ತೊಟ್ಟಿಲಲ್ಲಿ ತೂಗುವ ಮೂಲಕ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಚಾಲನೆ

mng_26 aug kadri (40)
ಶ್ರೀ ಕ್ಷೇತ್ರ ಮಂಜುನಾಥ ದೇವಸ್ಥಾನದ ಆವರಣದಲ್ಲಿ 20ಕ್ಕೂ ಅಧಿಕ ಹಸುಗೂಸುಗಳನ್ನು ತೊಟ್ಟಿಲಲ್ಲಿ ತೂಗುವ ಮೂಲಕ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಚಾಲನೆ ನೀಡಲಾಯಿತು.
Published on

ಮಂಗಳೂರು: ಅಳುವ, ನಗುವ, ಅಮ್ಮನ ಮಡಿಲಲ್ಲಿ ಮಲಗಿರುವ, ಆಟವಾಡುವ, ಅತ್ತಿಂದಿತ್ತ ಓಡಾಡುವ, ಬೆಣ್ಣೆ ತಿನ್ನುವ, ಕೊಳಲನೂದುವ ಕೃಷ್ಣ, ರಾಧೆಯೊಂದಿಗೆ ನೃತ್ಯ ಕೃಷ್ಣ ಮಾಡುವ ಹೀಗೆ ಎಲ್ಲಿ ನೋಡಿದರೂ ಕೃಷ್ಣರೇ..

ಕದ್ರಿಯ ಮಂಜುನಾಥನ ಸನ್ನಿಧಿ ಸೋಮವಾರ ಸಂಪೂರ್ಣ ಕೃಷ್ಣ ಮಯವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಕೃಷ್ಣರು ಕ್ಷೇತ್ರಕ್ಕೆ ಆಗಮಿಸಿದ್ದರು.

ಕಲ್ಕೂರ ಪ್ರತಿಷ್ಠಾನದಿಂದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಕದ್ರಿ ಶ್ರೀ ಕ್ಷೇತ್ರ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಕಳೆದ ವರ್ಷದಂತೆ ಈಬಾರಿಯೂ ವೈಭವದ ಸ್ಪರ್ಧೆ ಆಯೋಜನೆಗೊಂಡಿದ್ದು, ತಾಯಂದಿರ ಉತ್ಸಾಹ ಹೆಚ್ಚಾಗಿದೆ. ಮಕ್ಕಳಿಗೆ ಕೃಷ್ಣ ವೇಷ ಹಾಕಿಸಿ, ಮನೆಮಂದಿಯೆಲ್ಲ ಸೇರಿ ದೇವಳಕ್ಕೆ ಬಂದಿದ್ದು, ಹೊರ ಆವರಣ ಜನರಿಂದ ತುಂಬಿತ್ತು. ತೊಟ್ಟಿಲಕೃಷ್ಣ, ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ಶಂಖನಾದ, ಶಂಖ ಉದ್ಘೋಷ, ರಾಧಾಕೃಷ್ಣ, ರಾಧಾಮಾಧವ, ಯಶೋಧಾಕೃಷ್ಣ, ದೇವಕೀಕೃಷ್ಣ, ವಸುದೇವ ಕೃಷ್ಣ(ಮುಕ್ತ ವಿಭಾಗ), ಯಕ್ಷ ಕೃಷ್ಣ, ನಂದಗೋಕುಲ(ಸಮೂಹ ವಿಭಾಗ), ಛಾಯಾಕೃಷ್ಣ, ಶ್ರೀಕೃಷ್ಣ ವೈಭವ ಚಿತ್ರಕಲೆ, ಅಚ್ಯುತ ರಸಪ್ರಶ್ನೆ ಲಿಖಿತ, ಮಾಧವ ರಸಪ್ರಶ್ನೆ ಲಿಖಿತ, ಕೇಶವ ರಸಪ್ರಶ್ನೆ ಲಿಖಿತ, ಪಂಡರಾಪುರ ವಿಠಲ(ನೃತ್ಯ ಭಜನಾ ಸ್ಪರ್ಧೆ), ಬಹುಭಾಷಾ ಭಜನೆ ಭಕ್ತಿಗೀತೆ ರಚನೆ, ಬಹುಭಾಷಾ ಕವನ ರಚನೆ, ರಂಗೋಲಿಯಲ್ಲಿ ಶ್ರೀಕೃಷ್ಣ, ಕೃಷ್ಣ ಕಥಾ, ಆನ್‌ಲೈನ್ ವಿಭಾಗದಲ್ಲಿ ವೃಕ್ಷಕೃಷ್ಣ, ಗೋಪಾಲಕೃಷ್ಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

------------------

ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣ ಮೇರು ಶಿಖರ

ಮಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣ ಮೇರು ಶಿಖರ. ಜೀವನವನ್ನು ಮನುಕುಲಕ್ಕೆ ಮಾದರಿಯಾಗಿ ಜೀವಿಸಿದ ದೇವರು ಕೃಷ್ಣ ಎಂದು ಮಂಗಳೂರು ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜಿ ಮಹಾರಾಜ್ ಹೇಳಿದರು.

ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಕದ್ರಿಯ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಕಲ್ಕೂರ ಪ್ರತಿಷ್ಠಾನದ ನೇತೃತ್ವದಲ್ಲಿ ಪ್ರತಿವರ್ಷ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಸುತ್ತಿರುವ ಪ್ರದೀಪ ಕುಮಾರ ಕಲ್ಕೂರ ಅವರ ಆಸಕ್ತಿ ಮತ್ತು ಕ್ರಿಯಾಶೀಲತೆ ಎಲ್ಲರಿಗೂ ಮಾದರಿಯಾದುದು. ಶ್ರೀಕೃಷ್ಣ ದೇವರು ನಮ್ಮ ದೇಶವನ್ನು ಪ್ರಜ್ವಲಗೊಳಿಸಲಿ ಎಂದರು.

ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಕೃಷ್ಣನ ಅವತಾರ ಧರ್ಮಸೂಕ್ಷ್ಮವನ್ನು ಬೋಧಿಸಿದ ಅವತಾರವಾಗಿದೆ. ಜಗತ್ತಿಗೆ ಧಾರ್ಮಿಕತೆಯ ತಿಳಿವಳಿಕೆಯನ್ನು ಕೃಷ್ಣ ನೀಡಿದ್ದಾನೆ. ಕೃಷ್ಣ ವೇಷ ಸ್ಪರ್ಧೆ ಭಾರತೀಯ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಮುಖರಾದ ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸಿ, ಎ.ಜೆ. ಶೆಟ್ಟಿ, ನಿತಿನ್ ಕುಮಾರ್, ರತ್ನಾಕರ ಜೈನ್, ಜಿ.ಕೆ. ಭಟ್ ಸೇರಾಜೆ, ಶಕೀಲಾ ಕಾವ, ಭುವನಾಭಿರಾಮ ಉಡುಪ, ವಿಜಯಲಕ್ಷ್ಮಿ ಶೆಟ್ಟಿ, ಮಂಜುಳಾ ಶೆಟ್ಟಿ, ಜ್ಯೂಲಿಯೆಟ್, ಜಯಮ್ಮ, ಸಮೀರ್ ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

-----------------

ತೊಟ್ಟಿಲ ತೂಗಿ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಚಾಲನೆ

ಶ್ರೀಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯರು ಮತ್ತು ಪುಟಾಣಿ ಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆದೊಂದಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಂಡಿತು. 20ಕ್ಕೂ ಅಧಿಕ ಹಸುಗೂಸುಗಳನ್ನು ತೊಟ್ಟಿಲಲ್ಲಿ ತೂಗುವ ಮೂಲಕ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಚಾಲನೆ ದೊರೆಯಿತು. ಅಮ್ಮಂದಿರು ಜೋಗುಳ ಹಾಡಿ ಮಕ್ಕಳನ್ನು ತೊಟ್ಟಿಲಿನಲ್ಲಿ ತೂಗಿದರು. ಬಳಿಕ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

----------------

ಕದ್ರಿಯ ಮಂಜುನಾಥನ ಸನ್ನಿಧಿಯಿಂದ ಸಂಪೂರ್ಣ ಕೃಷ್ಣಮಯ. ಸಾವಿರಾರಕ್ಕೂ ಅಧಿಕ ಮಕ್ಕಳು ವೇಷ ಸ್ಪರ್ಧೆಯಲ್ಲಿ ಭಾಗವಹಿಸುವುದು, ಹೆತ್ತವರು ಅದಕ್ಕೆ ಬೇಕಾದ ಪರಿಕರಗಳನ್ನು ಜೋಡಿಸಿಕೊಳ್ಳುವುದು, ಮನೆ ಮಂದಿಯೆಲ್ಲ ದೇವಸ್ಥಾನಕ್ಕೆ ಬರುವುದು ಇದೊಂದು ವಿಶೇಷ ಪರಿಕಲ್ಪನೆಯಾಗಿದೆ. ಇಂತಹ ದೃಶ್ಯಗಳು ಬೇರೆಲ್ಲೂ ಕಾಣಲು ಸಿಗದು.

ವೇದವ್ಯಾಸ ಕಾಮತ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net