

ಬೆಂಗಳೂರು: ಯುವಜನೆತೆಯಲ್ಲಿ ವ್ಯಾಸ ಸಾಹಿತ್ಯ ಹಾಗೂ ದಾಸ ಸಾಹಿತ್ಯದ ಅರಿವು ಬರಬೇಕು. ಅದಕ್ಕೆ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಯುವಕರು ಭಾಗವಹಿಸುವಂತೆ ಪ್ರೇರೇಪಣೆ ನೀಡಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಿವಿಮಾತು ಹೇಳಿದ್ದಾರೆ.
ಕತ್ರಿಗುಪ್ಪೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹರಿದಾಸ ಮಿಲನ ಮತ್ತು ದಾಸೋಪಾಸನ ಹಾಗೂ ಚಿಪ್ಪಗಿರಿ ತಪೋನಿದಿ ಶ್ರೀ ವಿಜಯದಾಸರ ಸೇವಾ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಂಡಿತ ಸತ್ಯಧ್ಯಾನ ಆಚಾರ್ಯ ಕಟ್ಟಿ, ವ್ಯಾಸ ಸಾಹಿತ್ಯದ ಸರಳ ರೂಪವೇ ದಾಸ ಸಾಹಿತ್ಯ ಎಂದು ತಿಳಿಸಿದರು. ಪಂಡಿತ ಡಾ.ಸತ್ಯನಾರಾಯಣಾಚಾರ್ಯರು ವಿಜಯ ದಾಸರ ಕೃತಿಗಳ ವೈಶಿಷ್ಟತೆಯ ಬಗ್ಗೆ ಉಪನ್ಯಾಸ ನೀಡಿದರು.
ಸಮೂಹದಲ್ಲಿ ನಿತ್ಯ ಗಾಯನ ಸೇವೆ, ವಾರದ ನೇರ ಪ್ರಸಾರ ಗಾಯನ ಸೇವೆ, ವಿಶೇಷ ದಾಸರ ಮತ್ತು ಯತಿಗಳ ಗಾಯನ ಸ್ಪರ್ಧೆ, ತಿಂಗಳಿಗೆ ಎರಡು ಬಾರಿ ಪಟ್ ಅಂತ ಹೇಳಿ ಹಾಗೂ ಶ್ರಾವಣಮಾಸದಲ್ಲಿ ಶ್ರಾವಣೀಯ ಶ್ರಾವಣೋಪಾಸನೆ, ಪಕ್ಷಮಾಸದಲ್ಲಿ ಪಿತೃಗಳ ಚಿಂತನೆ, ಹಲವಾರು ವೈವಿದ್ಯಮಯ ಸ್ಪರ್ಧೆ, ಚಿಂತನೆ ನಡೆಸಲಾಗಿತ್ತು ಆ ಎಲ್ಲ ಸ್ಪರ್ಧೆಗಳಲ್ಲಿ ವಿಜೇತರಾದ 11 ಜನರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಮಾರಂಭದಲ್ಲಿ ಚಿದಾನಂದ ಕುಲಕರ್ಣಿ ಅವರ ಪುಣ್ಯಕೋಟಿ ರೂಪಕ ಹಾಗೂ ಏಕಪಾತ್ರಾಭಿನಯ ಎಲ್ಲರ ಮನಸೂರೆಗೊಂಡಿತು. ಅಂಗವಿಕಲೆ ಬಾಲಕಿ ವೈಭವಿ ಕುಲಕರ್ಣಿ ಭರತ ನಾಟ್ಯ ಎಲ್ಲರ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮದಲ್ಲಿ ಶ್ರೀಪಾದ ಸಿಂಗನಮಲ್ಲಿ, ಪಂಡಿತ ಪದ್ಮನಾಭ ವರಖೇಡಿ, ಸುರೇಶ ಕಲ್ಲೂರ, ಡಾ. ಆರ್.ಪಿ. ಕುಲಕರ್ಣಿ, ರಾಧಿಕಾ ಜೋಶಿ, ಪ್ರಾಣೇಶ ಹರಿದಾಸ ಮತ್ತಿತರರು ಉಪಸ್ಥಿತರಿದ್ದರು.