ಕೊಕ್ಕಡ ವೈದ್ಯನಾಥೇಶ್ವರನಿಗೆ ಕೂಡಿಬಂದಿಲ್ಲ ಬ್ರಹ್ಮಕಲಶ ಭಾಗ್ಯ!: ಬಾಲಾಲಯದಲ್ಲೇ ದೇವರು : ಜಾತ್ರೆ ನೋಡದೆ ಮೂರು ವರುಷ : ರಾಜಕೀಯ ಡೊಂಬರಾಟಕ್ಕೆ ಭಕ್ತರು ಹೈರಾಣ

8-4
Published on

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣ್ಣುಮೂರ್ತಿ ದೇವಾಲಯ ಜೀರ್ಣಾವಸ್ಥೆಯಲ್ಲಿದ್ದು, ಮೂರು ವರ್ಷಗಳಿಂದ ದೇವರ ಬಲಿ, ನರ್ತನ ಸೇವೆ, ಪಲ್ಲಕ್ಕಿ ಸೇವೆ, ರಥೋತ್ಸವ ಕಂಡಿಲ್ಲ. ತಮ್ಮ ಕಷ್ಟ, ಕಾಯಿಲೆ, ನೋವುಗಳಿಗೆ ಹೇಳಿಕೊಂಡಿದ್ದಂತಹ ಹರಕೆಗಳನ್ನು ಒಪ್ಪಿಸಲು ಸಾಧ್ಯವಾಗದೆ ನಿತ್ಯ ಮನಸ್ಸಿನಲ್ಲಿ ವೇದನೆ ವ್ಯಕ್ತಪಡಿಸುತ್ತಿದ್ದಾರೆ. ಜೀರ್ಣೋದ್ಧಾರ ಕಾರ್ಯಗಳು ಪುನರಾರಂಭಗೊಂಡು ಬ್ರಹ್ಮಕಲಶ ನಡೆಯುವಂತೆ ಪ್ರಾರ್ಥಿಸುತ್ತಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ಮೇ 6ರಂದು ಕೊಕ್ಕಡದಲ್ಲಿ ಜಾತ್ರಾ ಸಂಭ್ರಮ ನಡೆಯುತಲಿತ್ತು.

2016ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿಟ್ಟಾಗ ಜ್ಯೋತಿಷ್ಯಶಾಸ್ತ್ರ ಸೂಚನೆಯಂತೆ ಬ್ರಹ್ಮಕಲಶ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ 2020ರ ಫೆಬ್ರವರಿ ತಿಂಗಳಲ್ಲಿ ಅಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಿ ಅಧ್ಯಕ್ಷ ರಾಧಾಕೃಷ್ಣ ಎಡಪಡಿತ್ತಾಯರ ಮುಖೇನ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾರ್ಯಗಳು ಆರಂಭಗೊಂಡವು. 2022 ರ ಡಿಸೆಂಬರ್‌ನಲ್ಲಿ ನಡೆದ ಅನುಜ್ಞಾ ಕಲಶದಂತೆ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗಿ 2024ರ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ದೇವರಿಗೆ ಬ್ರಹ್ಮಕಲಶ ನಡೆಸುವುದಾಗಿ ಸಮಯ ನಿಗದಿಯಾಗಿತ್ತು. ಆದರೆ 2023ರ ನವೆಂಬರ್ ತಿಂಗಳಲ್ಲಿ ವ್ಯವಸ್ಥಾಪನಾ ಸಮಿತಿಯ ಅಧಿಕಾರಾವಧಿ ಪೂರ್ಣಗೊಂಡು ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟ ಕಾರ್ಯಗಳನ್ನು ಮುಂದುವರಿಸಲು ಸಾಧ್ಯವಾಗದಂತಾಯಿತು.

2023ರ ನವೆಂಬರ್ ನಂತರ ಅದೇ ವ್ಯವಸ್ಥಾಪನಾ ಸಮಿತಿ ಮುಂದುವರಿಸುವಂತೆ ನೂತನ ವ್ಯವಸ್ಥಾಪನಾ ಸಮಿತಿ ಅರ್ಜಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಿತ್ತು. ಆದರೆ ಅರ್ಜಿ ಸಲ್ಲಿಸಿ ಎರಡು ವರ್ಷಗಳಾಗುತ್ತಾ ಬಂದರೂ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೆ ಸರ್ಕಾರದಿಂದ ಮಾನ್ಯತೆ ದೊರೆತಿಲ್ಲ. ವ್ಯವಸ್ಥಾಪನಾ ಸಮಿತಿ ಇಲ್ಲದೆ ಜೀರ್ಣೋದ್ಧಾರ ಕಾರ್ಯಗಳು ಮುಂದುವರಿಸಲು ಹಳೇ ಸಮಿತಿಗೆ ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಜೀರ್ಣೋದ್ಧಾರ ಸಮಿತಿಗೂ ದೇಗುಲದಲ್ಲಿ ಜೀರ್ಣೋದ್ಧಾರ ಸಂಬಂಧಿತ ಕೆಲಸ ಮಾಡದಂತೆ ನಿಬರ್ಂಧವನ್ನು ತರುವ ಪ್ರಯತ್ನಗಳು ನಡೆದಿವೆ. ಇವೆಲ್ಲ ಕಾರಣಗಳಿಂದ ದೇವಾಲಯದಲ್ಲೀಗ ಜೀರ್ಣೋದ್ಧಾರ ಕಾರ್ಯಗಳು ನಡೆಯದೆ, ಇನ್ನೊಂದೆಡೆ ಭಕ್ತರ ಹರಕೆಗಳನ್ನು ಒಪ್ಪಿಸಲು ಸಾಧ್ಯವಾಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಜೀರ್ಣೋದ್ಧಾರ ಕಾರ್ಯಕ್ಕಾಗಿ ಧನ ಸಂಗ್ರಹಣೆಗೂ ವ್ಯವಸ್ಥಾಪನಾ ಸಮಿತಿ ಇಲ್ಲದೆ ಸಂಕಷ್ಟ ಎದುರಾಗಿದೆ.

ಭಕ್ತರ ಪ್ರಾರ್ಥನೆ

ಇದು ಅನೇಕ ಗ್ರಾಮಗಳ ಸೀಮೆ ದೇವಸ್ಥಾನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಏಕೈಕ ವೈದ್ಯನಾಥ ದೇವರ ಕ್ಷೇತ್ರ ಇದು. ಪ್ರತಿದಿನ ನೂರಾರು ಭಕ್ತರು ದೇವಳಕ್ಕೆ ಆಗಮಿಸುತ್ತಿದ್ದು, ಪ್ರಧಾನ ದೇವರಾದ ಶ್ರೀ ವೈದ್ಯನಾಥೇಶ್ವರ ವಿಷ್ಣ್ಣುಮೂರ್ತಿ ಸಹಿತ, ಉಳ್ಳಾಲ್ತಿ, ಮಹಾಗಣಪತಿ, ಶಾಸ್ತಾರ, ನೀಲಕಂಠ ದೇವರು ಬಾಲಾಲಯದಲ್ಲೇ ಉಳಿದಿರುದನ್ನು ಕಂಡು ಮರುಗುತ್ತಿದ್ದಾರೆ. ಜೀರ್ಣೋದ್ಧಾರ ಕಾರ್ಯ ಶ್ರೀ ಪೂರ್ಣಗೊಳ್ಳುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಶಕ್ತಿ ತುಂಬಲು ಭಕ್ತರಿಂದ ನಾನಾ ಸೇವೆಗಳು

ನಿಧಾನಗತಿಯಲ್ಲಿರುವ ಜೀರ್ಣೋದ್ಧಾರ ಕಾರ್ಯ ವೇಗ ಪಡೆಯುವಂತೆ ಭಕ್ತರಿಂದ ನಾನಾ ರೀತಿಯ ಪರಿಹಾರ ಸೇವೆಗಳು ನಡೆಯುತ್ತಿವೆ. ಮೇ 6ರಂದು ಕೆ.ಯು.ಪದ್ಮನಾಭ ತಂತ್ರಿ ನೇತೃತ್ವದಲ್ಲಿ ದೇಗುಲದಲ್ಲಿ ಕ್ಷೇತ್ರಾಭಿವೃದ್ಧಿ ಹಾಗೂ ಲೋಕ ಕಲ್ಯಾಣಾರ್ಥ ಶ್ರೀ ಧನ್ವಂತರಿ ಯಾಗ ಹಾಗೂ ಶ್ರೀ ರುದ್ರಯಾಗ ಜರಗಲಿದೆ. ಸೇವಾರ್ಥ ಋಗ್ವೇದ ಪಾರಾಯಣ ನಡೆಯುತ್ತಿದ್ದು, ಎಂಟು ಅಷ್ಟಕಗಳನ್ನು ಎಂಟು ಜನ ನಾಲ್ವಿಕೆಗೆ (ದೇವಳದ ಹಳೆಯ ಯಜಮಾನಿಕೆ) ಸಂಬಂಧಪಟ್ಟವರು ಮತ್ತು ಭಕ್ತರು ಮಾಡಲಿದ್ದಾರೆ. 7ರಂದು ಬೆಳಗ್ಗೆ 11ಕ್ಕೆ ತುಲಾಭಾರ ಸೇವೆ ನಡೆಯಲಿದೆ.

ದೇಗುಲದ ಭಕ್ತರ ಪ್ರಾರ್ಥನೆಯಂತೆ 2024ರ ಮಾರ್ಚ್ ವೇಳೆಗೆ ಸಂಪೂರ್ಣ ಕೆಲಸಗಳು ಮುಗಿದು ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ನಡೆಯಬೇಕಿತ್ತು. ಆದರೆ ಎಲ್ಲ ದೇವರು ಮೂರು ವರ್ಷಗಳಿಂದ ಬಾಲಾಲಯದಲ್ಲಿಯೇ ಇರುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಕೆಲಸವೂ ನಡೆಯದೆ ಆತಂಕ ಮಾಡಿದವರಿಗೆ ದೇವರೇ ಸದ್ಬುದ್ಧಿ ನೀಡಲಿ. ಕೆ.ಬಾಲಕೃಷ್ಣ ಕೆದಿಲಾಯ ಶ್ರೀಕ್ಷೇತ್ರ ಕೊಕ್ಕಡ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net