ಪೆಹಲಗಾಂವನ ಉಗ್ರರ ಕೃತ್ಯಕ್ಕೆ ಶ್ರೀಉಜ್ಜಯಿನಿ ಜಗದ್ಗುರುಗಳ ಖಂಡನೆ

ujjay
Published on

ಕೊಟ್ಟೂರು : ಕಾಶ್ಮೀರದ ಪೆಹಲ್‌ಗಾಂವದಲ್ಲಿ ನಡೆದ ಹಿಂದೂಗಳ ನರಮೇಧವನ್ನು ಶ್ರೀಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಉಗ್ರವಾಗಿ ಖಂಡಿಸಿದ್ದಾರೆ.

ಪ್ರವಾಸಕ್ಕೆ ತೆರಳಿದ ಹಿಂದೂಗಳನ್ನು ಧರ್ಮಾಧಾರಿತವಾಗಿ ಆಯ್ಕೆ ಮಾಡಿ ಮಡದಿ ಮಕ್ಕಳ ಮುಂದೆಯೇ ಹತ್ಯೆ ಮಾಡಿರುವುದು ಅತ್ಯಂತ ಘೋರ ಭಯೋತ್ಪಾದಕ ಕೃತ್ಯ. ಈ ರೀತಿಯಾಗಿ ಒಬ್ಬೊಬ್ಬರನ್ನು ಹೆಸರು, ಜಾತಿ, ಧರ್ಮದ ವಿವರ ಪಡೆದು ಹತ್ಯೆ ಮಾಡುವ ಘಟನೆಗಳು ವಿದೇಶಗಳಲ್ಲಿ ನಡೆದಿದ್ದವು. ಆದರೆ ಬಹುಸಂಖ್ಯಾತರಾಗಿರುವ ಹಿಂದುಗಳ ದೇಶ ಭಾರತದಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಮುಂದಿನ ಕರಾಳ ಭವಿಷ್ಯವನ್ನು ಸೂಚಿಸಿದಂತಿದೆ.

ಈ ಉಗ್ರ ಕೃತ್ಯವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ಪಕ್ಷಗಳು ಕೇಂದ್ರದ ನಿರ್ಣಯಕ್ಕೆ ಬೆಂಬಲ ಸೂಚಿಸಬೇಕು. ಈ ಘಟನೆಗೆ ಕಾರಣವಾದವರನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಿ, ಶತ್ರು ರಾಷ್ಟ್ರಗಳ ಕೈವಾಡ ಇದ್ದಲ್ಲಿ ದೇಶದ ಸೇನಾ ಶಕ್ತಿಯನ್ನು ಬಳಸಿ ತಕ್ಕ ಉತ್ತರ ನೀಡಬೇಕು. ನೊಂದ ಕುಟುಂಬದ ಜೊತೆಗೆ ಇಡೀ ದೇಶದ ಜನತೆ ನಿಲ್ಲಬೇಕು ಎಂದು ಉಜ್ಜಯಿನಿ ಜಗದ್ಗುರುಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net