

ಉಪ್ಪಿನಂಗಡಿ: ಎಳೆಯ ವಯಸ್ಸಿನಲ್ಲೇ ಚಿತ್ತವನ್ನರಳಿಸುವ ಸಂಸ್ಕಾರ ಶಿಕ್ಷಣದಿಂದಾಗಿ ಮಕ್ಕಳಲ್ಲಿ ಭರವಸೆ ಮೂಡಿಸುವಂತಾಗಿದೆ ಎಂದು ಶ್ರೀ ಮಾಧವ ಶಿಶು ಮಂದಿರದ ಪಾಲಕ ಸಂಘದ ಅಧ್ಯಕ್ಷೆ ಶ್ರೀದೇವಿ ಗೌತಮ್ ಹೇಳಿದರು.
ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ಪಾಲಕರ ಸಭೆಯಲ್ಲಿ ಮಾತನಾಡಿ, ಮಕ್ಕಳು ದೊಡ್ಡವರಾದರೂ ಎಲ್ಲವನ್ನೂ ಪಾಲಕರೇ ಮಾಡಿಕೊಡುವಂತಹ ಇಂದಿನ ಕಾಲಘಟ್ಟದಲ್ಲಿ ಶಿಶು ಮಂದಿರದಲ್ಲಿ ಕಲಿಯುವ ಮಕ್ಕಳು ಸ್ವಾವಲಂಬಿ ಜೀವನವನ್ನು ಎಳವೆಯಲ್ಲೇ ನಡೆಸಿ ಮನೆ ಮಂದಿಯ ಮನಸ್ಸು ಗೆಲ್ಲುತ್ತಿದ್ದಾರೆ. ಮುಂಜಾನೆದ್ದು ಪ್ರಾತಃವಿಧಿಗಳನ್ನು ಫೂರೈಸಿ ಸ್ನಾನಾದಿ ಕರ್ಮಗಳನ್ನು ನಡೆಸಿ ತಾವೇ ಸ್ವತಃ ದೇವರ ಪೂಜೆ ಮಾಡಿ ಮನೆಯ ಹಿರಿಯರೆಲ್ಲರ ಪಾದಸ್ಪರ್ಶಿಸಿ ಆಶೀರ್ವಾದವನ್ನು ಪಡೆಯುವ ಪುಟಾಣಿ ಮಕ್ಕಳ ನಡೆ ಸರ್ವತ್ರ ಗಮನ ಸೆಳೆಯುತ್ತಿದೆ. ರಾತ್ರಿ ಮನೆಯಲ್ಲಿನ ಎಲ್ಲರೂ ಭಜನೆಯನ್ನು ಮಾಡಲೇ ಬೇಕಾದ ಸ್ಥಿತಿಯನ್ನು ಇಲ್ಲಿನ ಮಕ್ಕಳು ಮೂಡಿಸಿರುವುದರಿಂದ ಶಿಶು ಮಂದಿರದ ಜತೆ ನಂಟು ಬೆಸೆದ ಪ್ರತಿಯೊಂದು ಮನೆಯೂ ಸಂಸ್ಕಾರದ ಬೆಳಕಿನಿಂದ ಪ್ರಕಾಶಿಸುವಂತಾಗಿದೆ ಎಂದು ವಿವರಿಸಿದರು.
ಶಿಶು ಮಂದಿರದ ಆಡಳಿತ ಮಂಡಳಿಯ ಕಂಗ್ವೆ ವಿಶ್ವನಾಥ ಶೆಟ್ಟಿ, ಪಾಲಕ ಸಂಘದ ಉಪಾಧ್ಯಕ್ಷೆ ಭವ್ಯ ಕುಮಾರಿ, ಕಾರ್ಯದರ್ಶಿ ಲಲಿತಾ, ಪ್ರಮುಖರಾದ ಸೀತಾರಾಮ್, ಶುಭಶ್ರೀ, ಭಾಗ್ಯಶ್ರೀ, ಆನಂದ, ಶುಭಗೀತಾ ಸುರೇಶ್ ಬಿಳಿಯೂರು, ಚೇತನಾ, ದಿವ್ಯ, ಅಕ್ಷತಾ, ಶುಭಾ ಶಿವಪ್ರಸಾದ್, ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ, ಚಂದ್ರಾವತಿ ಮೊದಲಾದವರು ಭಾಗವಹಿಸಿದ್ದರು.