

ಮೂಡುಬಿದಿರೆ: ಮಕ್ಕಳಲ್ಲಿ ಸಂಸ್ಕೃತಿಯ ಪರಿಚಯ ಮಾಡಬೇಕಾದುದು ಪಾಲಕರ ಕರ್ತವ್ಯ. ಪಾಲಕರು ಧಾರ್ಮಿಕತೆಯನ್ನು ಪಾಲಿಸಿದರೆ ಮಕ್ಕಳಿಗೂ ಈ ಕುರಿತಾದ ಆಸಕ್ತಿ ಮೂಡಲು ಸಾಧ್ಯ. ಸಂಸ್ಕಾರ ತಿಳಿಸುವ ಶ್ರೀಕೃಷ್ಣ ಲೀಲೋತ್ಸವ ಆಯೋಜನೆ ಅರ್ಥಪೂರ್ಣ ಎಂದು ಸಿಂಚನಾ ಸೌಹಾರ್ದ ಸಹಕಾರಿ ಸಿಇಒ ಸಂಗೀತಾ ಪ್ರಭು ಹೇಳಿದರು.
ಮೂಡುಬಿದಿರೆ ಕಡಲಕೆರೆ ಬಳಿಯಿರುವ ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ಪ್ರವರ್ತಿತ ಪ್ರೇರಣಾ ಶಿಶುಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೇವಾಂಜಲಿ ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್ ಮಾತನಾಡಿ, ವಿದ್ಯೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನೂ ಕಲಿಸಿ ಕೊಡುವ ಶಿಕ್ಷಣ ಕೊಡುವುದು ಸೇವಾಂಜಲಿಯ ಉದ್ದೇಶ ಎಂದರು.
ಸೇವಾಂಜಲಿ ಸಂಚಾಲಕ ಎಂ.ಶಾಂತರಾಮ ಕುಡ್ವ ಅಧ್ಯಕ್ಷತೆ ವಹಿಸಿದರು. ಪ್ರೇರಣಾ ಶಾಲೆ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್, ಶಿಶುಮಂದಿರದ ಶಿಕ್ಷಕಿ ಪುಷ್ಪಾ ಹೆಗ್ಡೆ, ಸ್ವಾತಿ, ಸುಜಿತ್, ನಾರಾಯಣ ಉಪಸ್ಥಿತರಿದ್ದರು. 45 ಮಂದಿ ಪುಟಾಣಿಗಳು ಶ್ರೀಕೃಷ್ಣ, ರಾಧೆಯ ವೇಷ ಧರಿಸಿದ್ದರು.