ಬೆಂಗಳೂರಿನಲ್ಲಿ ಮೇ4ಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿ; ಎಸ್.ಎಂ.ಕೃಷ್ಣಗೆ ಪ್ರಶಸ್ತಿ

Renukacharya Jayanthi
Published on

ಬೆಂಗಳೂರು: ಹುಟ್ಟಿದ ಪ್ರತಿಯೊಬ್ಬ ಜೀವಿಯೂ ತನ್ನ ಅಧ್ಯಾತ್ಮ ಸಾಧನೆಯಿಂದ ಭಗವಂತನೊಂದಿಗೆ ಅನುಸಂಧಾನ ಮಾಡಲು ಸಾಧ್ಯವೆಂದು ಸಾರಿದ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವು ಪಾಲ್ಗುಣ ಶುದ್ಧ ತ್ರಯೋದಶಿಯಂದಾದರೂ ವರ್ಷಪೂರ್ತಿ ಜಯಂತಿ ಕಾರ್ಯಕ್ರಮ ನಡೆಯುತ್ತವೆ. ಅಂತೆಯೇ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೇ.4 ರಂದು ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಆನಂದರಾವ್ ವೃತ್ತದಲ್ಲಿರುವ ಶ್ರೀಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಹಿಸಲಿದ್ದಾರೆ. ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಡೀನ್ ಡಾ.ಎ.ಸಿ.ವಾಲಿಯವರು ಶ್ರೀಜಗದ್ಗುರು ರೇಣುಕರ ಕ್ರಾಂತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ತುಮಕೂರು ವಿವಿ ವಿಶ್ರಾಂತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಖಂಡಿಮಠ ವೀರಶೈವ ಸಿದ್ಧಾಂತ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಂದು ಬಿಡುಗಡೆಯಾಗಲಿರುವ ಸಿದ್ಧಾಂತ ಶಿಖಾಮಣಿ ಗ್ರಂಥದ ಕುರಿತು ವಿದ್ವಾಂಸರಾದ ಡಾ.ಸಿ.ಶಿವಕುಮಾರಸ್ವಾಮಿ ಮಾತನಾಡಲಿದ್ದಾರೆ.

ಸಮಾರಂಭದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಂದ ಅತ್ಯುನ್ನತ ಪದವಿ ಪಡೆದ ಪ್ರಾಧ್ಯಾಪಕರಿಗೆ ಹಾಗೂ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಎಸ್‌ಜೆಆರ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯು.ಎಂ. ಬಸವರಾಜ ತಿಳಿಸಿದ್ದಾರೆ.

'ಶ್ರೀ ಜಗದ್ಗುರು ರೇಣುಕ ಸಿರಿ' ಪ್ರಶಸ್ತಿ: ಬಾಳೆಹೊನ್ನೂರು ಧರ್ಮಪೀಠ ಹಾಗೂ ಇನ್ನಿತರೆ ಮಠಗಳಲ್ಲಿ ನಡೆಯುತ್ತಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನ ಎಸ್‌ಜೆಆರ್ ವಿದ್ಯಾಸಂಸ್ಥೆಯಲ್ಲಿ ಬೃಹತ್ ಮಟ್ಟದಲ್ಲಿ ಆಯೋಜಿಸಲಾಗಿದ್ದು, ಶ್ರೀಜಗದ್ಗುರು ರೇಣುಕ ಸಿರಿ ಎಂಬ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.  ಸಮಾಜದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡುವ ಪ್ರಶಸ್ತಿಯನ್ನು ಮೊದಲ ಬಾರಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ನೀಡಲು ಆಯ್ಕೆ ಮಾಡಲಾಗಿದೆ. 1965ರ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು ಇಲ್ಲಿ ಗಮನಾರ್ಹ. ಮೇ.4ರಂದು ನಡೆಯುವ ಸಮಾರಂಭದಲ್ಲಿ ಶ್ರೀರಂಭಾಪುರಿ ಜಗದ್ಗುರುಗಳು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆಂದು ವಿದ್ಯಾಸಂಸ್ಥೆಯು ಪ್ರಕಟಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net