7 ವರ್ಷಗಳ ನಿಷೇಧದಿಂದ ಮುಕ್ತ, ಶ್ರೀಶಾಂತ್ ಸೆಕೆಂಡ್ ಸ್ಪೆಲ್‌ಗೆ ಸಿದ್ಧ

shree ban free web
Published on

ನವದೆಹಲಿ: ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಮೇಲಿನ, 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ 7 ವರ್ಷಗಳ ನಿಷೇಧ ಭಾನುವಾರಕ್ಕೆ ಮುಕ್ತಾಯಗೊಂಡಿದ್ದು, ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ನಾನೀಗ ಸಂಪೂರ್ಣ ಸ್ವತಂತ್ರ ಎಂದಿರುವ 37 ವರ್ಷದ ಶ್ರೀಶಾಂತ್, ಇನ್ನೂ 5-7 ವರ್ಷಗಳ ಕಾಲ ಆಡುವ ಹಂಬಲ ವ್ಯಕ್ತಪಡಿಸಿದ್ದಾರೆ. ಅವರ ಅಭಿಮಾನಿಗಳು ಈಗಾಗಲೆ ಟ್ವಿಟರ್‌ನಲ್ಲಿ ಶ್ರೀಶಾಂತ್ ಪುನರಾಗಮನವನ್ನು ‘ಸೆಕೆಂಡ್ ಸ್ಪೆಲ್’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಸಂಭ್ರಮಿಸಿದ್ದಾರೆ.

ಮುಂಬರುವ ದೇಶೀಯ ಕ್ರಿಕೆಟ್‌ನಲ್ಲಿ ತವರು ರಾಜ್ಯ ಕೇರಳ ಪರ ರಣಜಿ ಟ್ರೋಫಿಯಲ್ಲಿ ಆಡುವ ಸಿದ್ಧತೆಯಲ್ಲಿರುವ ಶ್ರೀಶಾಂತ್ ಇದಕ್ಕಾಗಿ ಾರ್ಮ್ ಮತ್ತು ಫಿಟ್ನೆಸ್ ಸಾಬೀತುಪಡಿಸಬೇಕಾಗಿದೆ. ಈಗಾಗಲೆ ಅವರು ಕೊಚ್ಚಿಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ.

‘ನಾನೀಗ ಯಾವುದೇ ಆರೋಪ ಅಥವಾ ಎಲ್ಲದರಿಂದಲೂ ಸಂಪೂರ್ಣ ಮುಕ್ತನಾಗಿದ್ದೇನೆ. ನಾನು ಅತ್ಯಂತ ಹೆಚ್ಚು ಇಷ್ಟಪಡುವ ಆಟವನ್ನು ಆಡಬಹುದಾಗಿದೆ. ನಾನಿನ್ನು ಪ್ರತಿ ಎಸೆತದಲ್ಲೂ, ಅಭ್ಯಾಸದ ವೇಳೆಯಲ್ಲೂ ನನ್ನ ಶ್ರೇಷ್ಠ ನಿರ್ವಹಣೆಯನ್ನೇ ತೋರುವೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

‘ನಾನಿನ್ನು 5ರಿಂದ ಗರಿಷ್ಠ 7 ವರ್ಷದವರೆಗೆ ಆಡಲು ಬಯಸಿರುವೆ. ನಾನು ಆಡುವ ಯಾವುದೇ ತಂಡದ ಪರ ನನ್ನ ಶ್ರೇಷ್ಠ ನಿರ್ವಹಣೆಯನ್ನೇ ತೋರುವೆ’ ಎಂದು ಶ್ರೀಶಾಂತ್ ತಿಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶ್ರೀಶಾಂತ್‌ಗೆ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮೊದಲಿಗೆ ಆಜೀವ ನಿಷೇಧ ಶಿಕ್ಷೆಯಾಗಿತ್ತು. ಬಳಿಕ ಅವರು, ಸುಪ್ರೀಂ ಕೋರ್ಟ್ ಮೊರೆ ಹೋದ ಕಾರಣದಿಂದಾಗಿ 2019ರಲ್ಲಿ ನಿಷೇಧ ಶಿಕ್ಷೆ 7 ವರ್ಷಗಳಿಗೆ ಇಳಿದಿತ್ತು.

ಭಾರತ ತಂಡದ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 87, 75 ಮತ್ತು 7 ವಿಕೆಟ್ ಕಬಳಿಸಿದ್ದಾರೆ. ಮುಂದಿನ ವರ್ಷದ ಐಪಿಎಲ್ ಮತ್ತು ಟಿ20 ವಿಶ್ವಕಪ್‌ನಲ್ಲೂ ಆಡುವ ಕನಸನ್ನು ಶ್ರೀಶಾಂತ್ ಈಗಾಗಲೆ ಹಂಚಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾಗ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಅದಕ್ಕೆ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೊಚ್ಚಿ ಟಸ್ಕರ್ಸ್‌ ತಂಡಗಳ ಪರ ಐಪಿಎಲ್ ಆಡಿದ್ದರು.

ಕ್ರಿಕೆಟ್‌ನಿಂದ ದೂರವಿದ್ದ ಕಳೆದ 7 ವರ್ಷಗಳಲ್ಲಿ ಶ್ರೀಶಾಂತ್ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದರು ಮತ್ತು ಬಿಗ್ ಬಾಸ್ ಸಹಿತ ಕೆಲ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net