

ಹೈದರಾಬಾದ್: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 (Pushpa-2 ) ದಿ ರೂಲ್ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಯಶಸ್ವಿಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಸಿನಿರಸಿಕರಿಗೆ ಪುಷ್ಪಗೆ (Pushpa-2 ) ಸಂಬಂಧಿಸಿದ ಅಪ್ಡೇಟ್ಗಳು ನಿರಂತರವಾಗಿ ದೊರೆಯುತ್ತಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಡಿಸೆಂಬರ್ 05ರಂದು ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದ್ದು, ಸದ್ಯ ಚಿತ್ರತಂಡ ವಿವಿಧ ರಾಜ್ಯಗಳಲ್ಲಿ ಭರ್ಜರಿ ಪ್ರಮೋಷನ್ ಮಾಡುತ್ತಿದೆ.
ಗುಂಟೂರು ಕಾರಂ ಬಂದ ನಂತರ ಟಾಲಿವುಡ್ನಲ್ಲಿ ಶ್ರೀಲೀಲಾ (Sreeleela) ಹೆಸರು ಮತ್ತಷ್ಟು ಜನಪ್ರಿಯವಾಯಿತು. ಈ ಚಿತ್ರದಲ್ಲಿ ಅವರ ಮಾಸ್ ಸ್ಟೆಪ್ಸ್ಗೆ ಯುವಕರು ಫಿದಾ ಆಗಿದ್ದಾರೆ. ಹೀಗಾಗಿ ಪುಷ್ಪ 2 ಚಿತ್ರತಂಡವು ಅವರಿಂದಲೇ ಕಿಸ್ಸಿಕ್ ಸಾಂಗ್ಗೆ ಹೆಜ್ಜೆ ಹಾಕಿಸಿದ್ದಾರೆ. ಮೊದಲಿಗೆ ಬಾಲಿವುಡ್ ನಟಿಯರಿಗೆ ಈ ಹಾಡಿಗಾಗಿ ಮೊದಲು ಅವಕಾಶ ನೀಡಲಾಗಿತ್ತು, ಆದರೆ ಅದು ಫಲಿಸಲಿಲ್ಲ. ಹೀಗಾಗಿ ಚಿತ್ರತಂಡ ಶ್ರೀಲೀಲಾ (Sreeleela) ಅವರಿಗೆ ಮಣೆ ಹಾಕಿದ್ದು, ಇದರಿಂದ ಚಿತ್ರತಂಡಕ್ಕೆ ಭರ್ಜರಿ ಹಣ ಉಳಿದಿದೆ.
ಪುಷ್ಪ-1 ನಲ್ಲಿ ನಟಿ ಸಮಂತಾ (Samantha) ಐಟಂ ಹಾಡಿಗೆ ಸೊಂಟ ಬಳುಕಿಸಿದ್ದರು. ಈ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುಂಚೆ ಬಿಡುಗಡೆ ಆಗಿದ್ದ ಈ ಹಾಡು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಹಾಗಾಗಿ ಪುಷ್ಪ 2 (Pushpa-2) ಸಿನಿಮಾದ ಐಟಂ ಹಾಡಿಗೆ ಶ್ರೀಲೀಲಾ ಹೆಜ್ಜೆ ಹಾಕಿದ್ದು, ಭರ್ಜರಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದ್ದು, ಸ್ಚತಃ ನಟಿ ಶ್ರೀಲೀಲಾ (SreeLeela) ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಟಿ ಶ್ರೀಲೀಲಾ, ಈ ಹಿಂದೆ ಅನೇಕ ಬಾರಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಆಫರ್ ಬಂದಿತ್ತು. ಆದರೆ ನಾನು ಒಪ್ಪಿರಲಿಲ್ಲ. ಈ ಪುಷ್ಪ 2ಗೆ ಒಪ್ಪಿಗೆ ನೀಡಲು ಕಾರಣವಿದೆ. ಅದು ಡಿಸೆಂಬರ್ 05ರಂದು ತಿಳಿಯಲಿದೆ. ಸಂಭಾವನೆಯ ಬಗ್ಗೆ ಮಾತನಾಡುವುದಾದರೆ ಈವರೆಗೂ ಹಣದ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ಅವಕಾಶ ಬಂತು ಹೆಜ್ಜೆ ಹಾಕಿದ್ದೇನೆ ಎಂದು ನಟಿ ಶ್ರೀಲೀಲಾ ಸಂಭಾವನೆಯ ಕುರಿತಾದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇತ್ತ ನಟಿ ಸ್ಪಷ್ಟನೆ ಕೊಡುತ್ತಿದ್ದಂತೆ, ನಿರ್ಮಾಪಕರು ನಟಿಗೆ ಸಂಭಾವನೆ ನೀಡಿಲ್ವಾ? ಹಣ ಪಡೆಯದೇ ಡ್ಯಾನ್ಸ್ ಮಾಡಿದ್ರಾ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ, ಅಂತಿಮವಾಗಿ ಈ ವದಂತಿಗಳಿಗೆ ಡಿಸೆಂಬರ್ 05ರಂದು ತೆರೆ ಬೀಳುವುದು ಪಕ್ಕಾ ಆಗಿದುದ, ಏನಾಗಬಹುದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.