ಜಿಲ್ಲಾದ್ಯಂತ ಶ್ರಾವಣ ಸಂಭ್ರಮ

madure
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಶ್ರಾವಣ ಮಾಸದ ಮೊದಲನೇ ಶನಿವಾರದ ಹಿನ್ನೆಲೆಯಲ್ಲಿ ವಿವಿಧ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮುಂಜಾನೆಯಿಂದಲೇ ದೇವರ ದರ್ಶನ ಪಡೆಯಲು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡುಬಂದವು. ದೇಗುಲಗಳಲ್ಲಿ ಘಂಟಾನಾದದೊಂದಿಗೆ ಭಕ್ತಿಯಲ್ಲಿ ತಲ್ಲೀನರಾಗಿದ್ದ ಭಕ್ತರು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು.

ದೇಗುಲಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇಗುಲ ಪ್ರಾಂಗಣಗಳಲ್ಲಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳು ಭಕ್ತರ ಗಮನ ಸೆಳೆಯಿತು. ವಿದ್ಯುದೀಪಗಳಿಂದ ಜಗಮಗಿಸುತ್ತಿದ್ದ ಆಲಯಗಳು, ದೇವರಿಗೆ ಚಿನ್ನಾಭರಣಗಳೊಂದಿಗೆ ಆಕರ್ಷಕ ಬಗೆಬಗೆಯ ಹೂವಿನ ಅಲಂಕಾರ ಆಕರ್ಷಣೀಯವಾಗಿತ್ತು. ಉಪವಾಸ ವ್ರತದಲ್ಲಿ ಭಗವಂತನ ದರ್ಶನವನ್ನು ಪಡೆದ ಭಕ್ತರು ವಿಶೇಷ ಪೂಜೆ ನೆರವೇರಿಸಿದರು. ದೇವಾಲಯ ಸಮಿತಿಗಳಿಂದ ಅನ್ನಸಂತರ್ಪಣೆ, ಹೋಮ ಹವನ, ಭಜನೆ ಸೇರಿ ಆಧ್ಯಾತ್ಮಿಕ ವಿಶೇಷ ಕಾರ್ಯಕ್ರಮಗಳು ವಿಶೇಷ ದಿನಕ್ಕೆ ಮೆರಗು ತಂದಿತ್ತು. ಬೆಳಗ್ಗೆಯಿಂದಲೇ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆದರು. ಹಣೆಯ ಮೇಲೆ ಮೂರು ನಾಮಗಳನ್ನು ಹಾಕಿಸಿಕೊಂಡು ಸರದಿ ಸಾಲಿನಲ್ಲಿ ನಿಂತು ಗೋವಿಂದನ ನಾಮಸ್ಮರಣೆಯೊಂದಿಗೆ ಭಕ್ತಿಭಾವದಲ್ಲಿ ಸಾಗುತ್ತಿದ್ದ ದೃಶ್ಯ ಕಂಡು ಬಂತು.

ದೇಗುಲಗಳಲ್ಲಿ ಭಕ್ತರ ದಂಡು: ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ, ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯಲ್ಲಿ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಸೇರಿ ವಿವಿಧ ಆಂಜನೇಯ ದೇಗುಲಗಳಲ್ಲಿ ಭಕ್ತರ ದಂಡೇ ನೆರೆದಿತ್ತು. ವಿಶೇಷ ಪೂಜೆ, ಅಭಿಷೇಕ, ಕುಂಕುಮಾರ್ಚನೆ, ಸಹಸ್ರಾರ್ಚನೆ, ಪುಲ್ಲಂಗಿಸೇವೆ, ಕಲ್ಯಾಣೋತ್ಸವ, ಮಹಾ ಮಂಗಳಾರತಿ ಸೇರಿ ವಿವಿಧ ಕೈಂಕರ್ಯಗಳು ಜರುಗಿದವು. ಕೆಲವು ದೇಗುಲಗಳಲ್ಲಿ ಬೆಳಗ್ಗೆ 3 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧುರೆಯಲ್ಲಿ

ವಿಶೇಷ ಪೂಜೆ:

ಜಿಲ್ಲೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯಲ್ಲಿನ ಶ್ರೀ ಶನಿಮಹಾತ್ಮ ದೇಗುದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರದ ಪ್ರಯುಕ್ತ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದರು. ಸರದಿ ಸಾಲಿನಲ್ಲಿ ನಿಂತು ದೇವರ ನಾಮ ಸ್ಮರಣೆ ಮಾಡುತ್ತಿದ್ದ ದೃಶ್ಯ ಕಂಡುಬಂತು. ಶ್ರೀ ಶನಿಮಹಾತ್ಮ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ತೈಲಾಭಿಷೇಕ ಸ್ವಾಮಿಗೆ ಹೂವಿನ ಅಲಂಕಾ ಮಾಡಲಾಗಿತ್ತು. ಬೆಂಗಳೂರು ನಗರ ಸೇರಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net