

ಶಾರ್ಜಾ: ಹಿಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸದಲ್ಲಿರುವ ಪಂಚ ಕನ್ನಡಿಗರನ್ನು ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-13ರ ಪಂದ್ಯದಲ್ಲಿ ಎದುರಾಗಲಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತೊಮ್ಮೆ ಕೇಂದ್ರಬಿಂದುವಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ಎದುರು ಭರ್ಜರಿ ಶತಕ ಸಿಡಿಸಿ ಮಿಂಚಿರುವ ರಾಹುಲ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್‌ಗೆ ಸಜ್ಜಾಗಿದ್ದಾರೆ. ಆರ್‌ಸಿಬಿ ತಂಡವನ್ನು 97 ಮಣಿಸಿರುವ ಪಂಜಾಬ್ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಬಲಿಷ್ಠ ಸಿಎಸ್‌ಕೆಗೆ ಮಣಿಸಿ ಲೀಗ್‌ನಲ್ಲಿ ಶುಭಾರಂಭ ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಕೂಡ ಹೋರಾಟಕ್ಕೆ ಸಜ್ಜಾಗಿದೆ.
ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕಡೇ ಹಂತದಲ್ಲಿ ಎಡವಿದ ಬಳಿಕ ಆರ್‌ಸಿಬಿ ವಿರುದ್ಧ ಭಾರಿ ಅಂತರದಲ್ಲಿ ಗೆದ್ದಿರುವ ಪಂಜಾಬ್ ಮತ್ತೊಂದು ಗೆಲುವಿನ ಹಂಬಲದಲ್ಲಿದೆ. ರಾಹುಲ್, ಮಯಾಂಕ್ ಅಗರ್ವಾಲ್ ಉತ್ತಮ ಫಾರ್ಮ್‌ನಲ್ಲಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಇನ್ನು ಬ್ಯಾಟಿಂಗ್ ಲಯ ಕಂಡುಕೊಂಡಿಲ್ಲ. ಆರ್‌ಸಿಬಿ ಎದುರು ಪ್ರರಾಕ್ರಮ ಮೆರೆದಿದ್ದ ರವಿ ಬಿಷ್ಣೋಯಿ, ಮುರುಗನ್ ಅಶ್ವಿನ್ ಜೋಡಿ ಮತ್ತೊಮ್ಮೆ ತಮ್ಮ ಮೋಡಿ ಮಾಡಲು ಸಜ್ಜಾಗಿದೆ. ಮತ್ತೊಂದೆಡೆ, ಶುಭಾರಂಭ ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಅದೇ ಲಯ ಮುಂದುವರಿಸುವ ಇರಾದೆಯಲ್ಲಿದೆ. ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಮೂಲಕ ಸಿಎಸ್‌ಕೆ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಆರಂಭಿಕ ಜೋಶ್ ಬಟ್ಲರ್ ತಂಡಕ್ಕೆ ವಾಪಸಾಗಿದ್ದು, ಬ್ಯಾಟಿಂಗ್ ಬಲ ಹೆಚ್ಚಿಸಿದೆ. ಜೋಫ್ರಾ ಆರ್ಚರ್, ಜೈದೇವ್ ಉನಾದ್ಕತ್, ರಾಹುಲ್ ತೆವಾಟಿಯಾ ಒಳಗೊಂಡ ಬೌಲಿಂಗ್ ಪಡೆ ಪಂಜಾಬ್ ತಂಡವನ್ನು ಕಟ್ಟಿಹಾಕಲು ಸಜ್ಜಾಗಿದೆ. ಅನುಭವಿ ಬ್ಯಾಟ್ಸ್‌ಮನ್ ಕನ್ನಡಿಗ ರಾಬಿನ್ ಉತ್ತಪ್ಪ ಲಯ ಕಂಡುಕೊಳ್ಳಬೇಕಿದೆ.
ಟೀಮ್ ನ್ಯೂಸ್:
ರಾಜಸ್ಥಾನ ರಾಯಲ್ಸ್
ಕುಟುಂಬದೊಂದಿಗೆ ಯುಎಇಗೆ ಆಗಮಿಸಿದ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿ ಹೆಚ್ಚು ದಿನ ಕಳೆದ ಹಿನ್ನೆಲೆಯಲ್ಲಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಇಂಗ್ಲೆಂಡ್‌ನ ಜೋಶ್ ಬಟ್ಲರ್ ಹನ್ನೊಂದರ ಬಳಗ ಕೂಡಿಕೊಳ್ಳಲಿದ್ದಾರೆ. ಬಟ್ಲರ್, ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಜತೆಗೂಡಿ ಇನಿಂಗ್ಸ್ ಆರಂಭಿಸಿದರೆ, ಕಳೆದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಸ್ಟೀವನ್ ಸ್ಮಿತ್ ನಾಲ್ಕನೇ ಕ್ರಮಾಂಕ ಡೇವಿಡ್ ಮಿಲ್ಲರ್ ಜಾಗದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಟಾಮ್ ಕರ‌್ರನ್ ಹಾಗೂ ಜೋಫ್ರಾ ಆರ್ಚರ್ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಮೊದಲ ಪಂದ್ಯದಲ್ಲಿ ವಿಫಲರಾಗಿರುವ ರಿಯಾನ್ ಪರಾಗ್ ಬದಲಿಗೆ ಮನನ್ ವೋಹ್ರಾ ಅವರಿಗೆ ಅವಕಾಶ ನೀಡಬಹುದು. ಉಳಿದಂತೆ ತಂಡದಲ್ಲಿ ಹೆಚ್ಚು ಬದಲಾವಣೆ ನಿರೀಕ್ಷಿಸುವಂತಿಲ್ಲ.
* ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ಜೋಶ್ ಬಟ್ಲರ್ (ವಿಕೀ), ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್ (ನಾಯಕ), ರಾಬಿನ್ ಉತ್ತಪ್ಪ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್/ಮನನ್ ವೋಹ್ರಾ, ಟಾಮ್ ಕರ‌್ರನ್, ಜ್ರೋಾ ಆರ್ಚರ್, ಶ್ರೇಯಸ್ ಗೋಪಾಲ್, ಜೈದೇವ್ ಉನಾದ್ಕತ್.
ಕಳೆದ ಪಂದ್ಯ: ಸಿಎಸ್‌ಕೆ ವಿರುದ್ಧ 16 ರನ್ ಜಯ
-------
ಕಿಂಗ್ಸ್ ಇಲೆವೆನ್ ಪಂಜಾಬ್
ಸತತ ಎರಡು ಪಂದ್ಯಗಳಲ್ಲಿ ವಿಲರಾಗಿರುವ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಬದಲಿಗೆ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತಂಡಕ್ಕೆ ವಾಪಸಾಗಬಹುದು. ಫಿಲ್ಡಿಂಗ್‌ನಲ್ಲಿ ಸಾಕಷ್ಟು ಎಡವುತ್ತಿರುವ ಸರ್ಫಾಜ್ ಖಾನ್ ಬದಲಿಗೆ ಮಂದೀಪ್ ಸಿಂಗ್‌ಗೆ ನಾಯಕ ರಾಹುಲ್ ಮಣೆ ಹಾಕಬಹುದು. ಎರಡೂ ಪಂದ್ಯಗಳಲ್ಲೂ ಭರ್ಜರಿ ನಿರ್ವಹಣೆ ತೋರಿರುವ ಪಂಜಾಬ್, ಗೆಲುವಿನ ತಂಡವೇ ಉಳಿಸಿಕೊಂಡರೂ ಅಚ್ಚರಿಯಿಲ್ಲ. ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಎಂ.ಅಶ್ವಿನ್ ಒಳಗೊಂಡ ಬೌಲಿಂಗ್ ಪಡೆಯೇ ಮತ್ತೊಮ್ಮೆ ತಂಡದ ಗೆಲುವಿಗೆ ಹೋರಾಡಲಿದೆ.
* ಸಂಭಾವ್ಯ ತಂಡ: ಕೆಎಲ್ ರಾಹುಲ್ (ನಾಯಕ, ವಿಕೀ), ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್/ಕ್ರಿಸ್ ಗೇಲ್, ಗ್ಲೆನ್ ಮ್ಯಾಕ್ಸ್‌ವೆಲ್, ಕರುಣ್ ನಾಯರ್, ಜೇಮ್ಸ್ ನೀಶಾಮ್, ಸರ್ಫಾಜ್ ಖಾನ್, ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಎಂ.ಅಶ್ವಿನ್.
ಕಳೆದ ಪಂದ್ಯ: ಆರ್‌ಸಿಬಿ ವಿರುದ್ಧ 97 ರನ್ ಜಯ
ಪಂದ್ಯ ಆರಂಭ: ರಾತ್ರಿ: 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 19, ರಾಜಸ್ಥಾನ ರಾಯಲ್ಸ್: 10, ಕಿಂಗ್ಸ್ ಇಲೆವೆನ್ ಪಂಜಾಬ್: 9