ವಿಶ್ವಕಪ್ ತಂಡದಲ್ಲಿ ಪೂನಂ; 12ನೇ ಆಟಗಾರ್ತಿಯಾಗಿ ಆಯ್ಕೆ

POONAM
Published on

ದುಬೈ: ಲೆಗ್ ಸ್ಪಿನ್ನರ್ ಪೂನಂ ಯಾದವ್ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ್ತಿ ಎನಿಸಿದ್ದಾರೆ.

16ರ ಹರೆಯದ ಶೆಫಾಲಿ ವರ್ಮ 12ನೇ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ. 5ನೇ ಬಾರಿಗೆ ಚಾಂಪಿಯನ್​ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾದ ಐವರು ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 85 ರನ್​ಗಳಿಂದ ಭಾರತ ತಂಡವನ್ನು ಸೋಲಿಸಿತ್ತು.

ಅಲೀಸಾ ಹೀಲಿ, ಬೆಥ್ ಮೂನಿ, ಮೆಗ್ ಲ್ಯಾನಿಂಗ್, ಜೆಸ್ ಜೊನಾಸೆನ್, ಮೇಗನ್ ಸ್ಕಟ್ ತಂಡದಲ್ಲಿ ಸ್ಥಾನ ಪಡೆದ ಆಸೀಸ್ ಆಟಗಾರ್ತಿಯರು. ಇಂಗ್ಲೆಂಡ್​ನ ನಾಲ್ಕು ಮಂದಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಾಜಿ ಆಟಗಾರರಾದ ಇಯಾನ್ ಬಿಷಪ್, ಭಾರತದ ಅಂಜುಂ ಚೋಪ್ರಾ, ಲೀಸಾ ಸ್ಥಳೇಕರ್, ಪತ್ರಕರ್ತ ರಾಫ್ ನಿಕೋಲ್ಸನ್, ಐಸಿಸಿ ಪ್ರತಿನಿಧಿ ಹೊಲಿ ಕೊಲ್ವಿನ್ ಒಳಗೊಂಡ ಆಯ್ಕೆ ಸಮಿತಿ ಐಸಿಸಿ ವಿಶ್ವಕಪ್ ಇಲೆವೆನ್ ತಂಡದ ಪ್ರಕಟಿಸಿತು.

ಪೂನಂ ಯಾದವ್ ಆಸ್ಟ್ರೇಲಿಯಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ 19 ರನ್​ಗಳಿಗೆ 4 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು. ಶೆಫಾಲಿ ವರ್ಮ ಟಿ20 ವಿಶ್ವಕಪ್ ಫೈನಲ್ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿದ್ದಾರೆ.

ಅಗ್ರಸ್ಥಾನ ಕಳೆದುಕೊಂಡ ಶೆಫಾಲಿ ವರ್ಮ

ಭಾರತದ ಯುವ ಬ್ಯಾಟ್ಸ್​ವುಮೆನ್ ಶೆಫಾಲಿ ವರ್ಮ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿದ ಮಹಿಳಾ ಟಿ20 ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಭಾನುವಾರ ಮೆಲ್ಬೋರ್ನ್ ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶೆಫಾಲಿ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹರಿಯಾಣ ಮೂಲದ ಶೆಫಾಲಿ 744 ಪಾಯಿಂಟ್ಸ್ ಸಂಗ್ರಹಿಸಿದ್ದು, ಟೂರ್ನಿಯ ಲೀಗ್ ಹಂತದ ಬಳಿಕ ಅಗ್ರಸ್ಥಾನದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net