ವಿಂಬಲ್ಡನ್​ ರಾಯಲ್​ ಬಾಕ್ಸ್​ನಲ್ಲಿ ದಿಗ್ಗಜರ ಹಾಜರಿ: ಜೋಕೊವಿಕ್​, ಅಲ್ಕರಾಜ್​ ಗೆಲುವಿನ ಓಟ

New Project
Published on

ಲಂಡನ್​: ಹಾಲಿ ಚಾಂಪಿಯನ್​ ಕಾಲೋರ್ಸ್​ ಅಲ್ಕರಾಜ್​, ಸೆರ್ಬಿಯಾ ತಾರೆ ನೊವಾಕ್​ ಜೋಕೊವಿಕ್​, ವಿಶ್ವ ನಂ.1 ಅರಿನಾ ಸಬಲೆಂಕಾ, ಇಟಲಿಯ ಕೊಬೊಲ್ಲಿ, ಸ್ವಿರ್ಜಲೆಂಡ್​ನ ಬೆಲಿಂಡಾ ಬೆನ್ಸಿಕ್​ ಪ್ರತಿಷ್ಠಿತ ಗ್ರಾಸ್​ ಕೋರ್ಟ್​ ಗ್ರಾಂಡ್​ ಸ್ಲಾಂ ವಿಂಬಲ್ಡನ್​ ಟೆನಿಸ್​ ಟೂರ್ನಿಯಲ್ಲಿ ಕ್ವಾರ್ಟರ್​ಫೈನಲ್​ಗೆ​ ಪ್ರವೇಶಿಸಿದ್ದಾರೆ. ಪುರುಷರ ಡಬಲ್ಸ್​ನಲ್ಲಿ ಭಾರತದ ಯೂಕಿ ಭಾಂಬ್ರಿ ಜೋಡಿ ನಿರಾಸೆ ಕಂಡಿದ್ದು, ಟೂರ್ನಿಯಲ್ಲಿ ಭಾರತೀಯರ ಸವಾಲು ಅಂತ್ಯ ಕಂಡಿದೆ.

ಆಲ್​ ಇಂಗ್ಲೆಂಡ್​ ಕ್ಲಬ್​ನಲ್ಲಿ ಸೋಮವಾರ ನಡೆದ ಪುರುಷರ ಪ್ರಿ ಕ್ವಾರ್ಟರ್​ಫೈನಲ್​​ನಲ್ಲಿ 24 ಗ್ರಾಂಡ್​ ಸ್ಲಾಂ ಒಡೆಯ ಜೋಕೊವಿಕ್​ 1-6, 6-4,6-4, 6-4 ರಿಂದ 11ನೇ ಶ್ರೇಯಾಂಕಿತ ಅಲೆಕ್ಸ್​ ಡಿ ಮಿನೌರ್​ ಎದುರು ಗೆಲುವು ದಕ್ಕಿಸಿಕೊಂಡರು. ಇದರೊಂದಿಗೆ 8ನೇ ವಿಂಬಲ್ಡನ್​ ಹಾಗೂ ದಾಖಲೆಯ 25ನೇ ಪ್ರಶಸ್ತಿ ಹೋರಾಟ ಜೀವಂತವಿರಿಸಿದ 38 ವರ್ಷದ ಜೋಕೋ, ಮುಕ್ತ ಟೆನಿಸ್​ ಯುಗದಲ್ಲಿ ಗರಿಷ್ಠ 63 ಬಾರಿ ಗ್ರಾಂಡ್​ ಸ್ಲಾಂನಲ್ಲಿ ಕ್ವಾರ್ಟರ್​ಫೈನಲ್​​ಗೇರಿದ ಆಟಗಾರ ಎನಿಸಿದರು. ಲಂಡನ್​ನಲ್ಲಿ 7 ಬಾರಿ ಪ್ರಶಸ್ತಿ ಗೆದ್ದಿರುವ ಅವರು, 8ನೇ ಬಾರಿ ಯಶಸ್ಸು ಕಂಡರೆ ಸ್ವಿಸ್​ ದಿಗ್ಗಜ ರೋಜರ್​ ಫೆಡರರ್​ ದಾಖಲೆ ಸರಿಗಟ್ಟಲಿದ್ದಾರೆ.

ವಿಶ್ವ ನಂ.2, ಸ್ಪೇನ್​ನ ಕಾಲೋರ್ಸ್​ ಅಲ್ಕರಾಜ್​ 6-7, 6-3, 6-4, 6-4 ರಿಂದ ರಷ್ಯಾದ ಆಂಡ್ರೆ ರುಬ್ಲೆವ್​ ಎದುರು ಜಯ ಸಾಧಿಸಿದರು. ಹ್ಯಾಟ್ರಿಕ್​ ಪ್ರಶಸ್ತಿ ಕನಸಿನಲ್ಲಿರುವ 22ನೇ ವರ್ಷದ ಅಲ್ಕರಾಜ್​, ಮುಂದಿನ ಸುತ್ತಿನಲ್ಲಿ ಆತಿಥೇಯ ಬ್ರಿಟನ್​ ತಾರೆ ಕ್ಯಾಮರೂನ್​ ನೊರ್ರಿ ಎದುರು ಕಾದಾಟ ನಡೆಸಲಿದ್ದಾರೆ. ಕ್ಯಾಮರೂನ್​ ಪ್ರಿಕ್ವಾರ್ಟರ್​ಫೈನಲ್​​ನಲ್ಲಿ ಚಿಲಿಯ ನಿಕೋಲಸ್​ ಜಾರ್ರಿ ಅವರನ್ನು 6-3, 7-6, 6-7, 6-7, 6-3 ಐದು ಸೆಟ್​ಗಳ ಹೋರಾಟದಲ್ಲಿ ಪರಾಭವಗೊಳಿಸಿದರು. ಭಾಂಬ್ರಿಗೆ ಸೋಲು: ಭಾರತದ ಯೂಕಿ ಭಾಂಬ್ರಿ ಹಾಗೂ ಅಮೆರಿಕದ ರಾರ್ಬಟ್​ ಗ್ಯಾಲೋವೇ ಪುರುಷರ ಡಬಲ್ಸ್​ನ ಮೂರನೇ ಸುತ್ತಿನಲ್ಲಿ 4-6,6-3, 6-7 ರಿಂದ ಸ್ಪೇನ್​ನ ಮಾರ್ಸೆಲ್​ ಗ್ರಾನೋಲ್ಲರ್ಸ್​ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜೆಬಲ್ಲೋಸ್​ ಜೋಡಿಗೆ ಶರಣಾಯಿತು.

ಸೆಂಟ್ರಲ್​ ಕೋರ್ಟ್​ ರಾಯಲ್​ ಬಾಕ್ಸ್​ನಲ್ಲಿ ಸ್ವಿಸ್​ ದಿಗ್ಗಜ ರೋಜರ್​ ಫೆಡರರ್​, ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮ ಕಾಣಿಸಿಕೊಂಡರು. ಜತೆಗೆ ಇಂಗ್ಲೆಂಡ್​ ಕ್ರಿಕೆಟಿಗರಾದ ಜೋ ರೂಟ್​, ಜೇಮ್ಸ್​ ಆಂಡರ್​ಸನ್​ ಹಾಜರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net