ಬೋನಿನಲ್ಲಿ ಸೆರೆಯಾದ ಚಿರತೆ

Published on

ಗುಂಡ್ಲುಪೇಟೆ: ತಾಲೂಕಿನ ಹಕ್ಕಲಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಜಾನುವಾರುಗಳನ್ನು ಕೊಲ್ಲುತ್ತಿದ್ದ ಚಿರತೆ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಸೋಮವಾರ ನಸುಕಿನಲ್ಲಿ ಬಿದ್ದಿದ್ದು, ಗ್ರಾಮದ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಒಂದೆರಡು ತಿಂಗಳಿನಿಂದ ಗ್ರಾಮದಲ್ಲಿ ಚಿರತೆಗಳ ದಾಳಿಯಿಂದ ಹತ್ತಾರು ರಾಸುಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಬಫರ್ ವಲಯ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಗ್ರಾಮದ ಜಮೀನಿನಲ್ಲಿ ತುಮಕೂರು ಮಾದರಿಯ ಬೋನು ಅಳವಡಿಸಿ ಒಳಗೆ ಮೇಕೆ ಕೂಡಿ ಹಾಕಿದ್ದರು. ಮೇಕೆ ತಿನ್ನಲು ಬಂದ ಭಾರಿ ಗಾತ್ರದ ಚಿರತೆ ಬೋನಿನೊಳಗೆ ಸೆರೆಯಾಗಿದೆ. ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿರತೆಯನ್ನು ವೀಕ್ಷಿಸಿದರು. ಮುಂಜಾನೆ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಬೋನನ್ನು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ದು ಮೂಲೆಹೊಳೆ ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net