ಜೈಸ್ವಾಲ್- ದುಬೆ ಅಬ್ಬರ: 2ನೇ ಪಂದ್ಯದಲ್ಲಿ 6 ವಿಕೆಟ್ ಜಯ, ಆಫ್ಘನ್ ವಿರುದ್ಧದ ಸರಣಿ ವಶಪಡಿಸಿಕೊಂಡ ರೋಹಿತ್ ಪಡೆ

Yashswi
Published on

ಇಂದೋರ್: ಆರಂಭಿಕ ಯಶಸ್ವಿ ಜೈಸ್ವಾಲ್ (68 ರನ್, 34 ಎಸೆತ, 5 ಬೌಂಡರಿ, 6 ಸಿಕ್ಸರ್) ಹಾಗೂ ಶಿವಂ ದುಬೆ (63* ರನ್, 32 ಎಸೆತ, 5 ಬೌಂಡರಿ, 4 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ಎದುರು 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ ಪಂದ್ಯ ಬಾಕಿಯಿರುವಂತೆಯೇ ರೋಹಿತ್ ಶರ್ಮ ಪಡೆ 2-0 ವಶಪಡಿಸಿಕೊಂಡಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಆಫ್ಘನ್, ಗುಲ್ಬಾದಿನ್ ನೈಬ್ (57 ರನ್, 35 ಎಸೆತ, 5 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನಡುವೆಯೂ ಭರ್ತಿ 20 ಓವರ್​ಗಳಲ್ಲಿ 172 ರನ್​ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್- ಶಿವಂ ದುಬೆ ಜತೆಯಾಟದ ಬಲದಿಂದ ಭಾರತ 4.2 ಓವರ್ ಬಾಕಿ ಇರುವಂತೆಯೇ 4 ವಿಕೆಟ್​ಗೆ 173 ರನ್​ಗಳಿಸಿ ಚೆಂಡಾಡಿದರು.

ಗೆಲುವಿನ ಜತೆಯಾಟ

ವಿರಾಟ್ ಕೊಹ್ಲಿ ನಿರ್ಗಮನದ ಬಳಿಕ ಯಶಸ್ವಿ ಜೈಸ್ವಾಲ್ ಜತೆಯಾದ ಆಲ್ರೌಂಡರ್ ಶಿವಂ ದುಬೆ ಆಫ್ಘನ್ ಬೌಲರ್​ಗಳನ್ನು ದಂಡಿಸಿದರು. ಮನಸೋಇಚ್ಛೆ ದಂಡಿಸಿದ ಇವರಿಬ್ಬರು 3ನೇ ವಿಕೆಟ್​ಗೆ 42 ಎಸೆತಗಳಲ್ಲಿ 92 ರನ್ ಕಸಿದರು. ಆರಂಭದಿಂದಲೂ ಅಬ್ಬರಿಸಿದ ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ ಅರ್ಧಶತಕಗಳಿಸಿದರೆ, ಉತ್ತಮ ಬೆಂಬಲ ನೀಡಿದ ದುಬೆ 22 ಎಸೆತದಲ್ಲಿ 2ನೇ ಅರ್ಧಶತಕ ಸಿಡಿಸಿ ಗೆಲುವಿನ ಹಾದಿ ಸುಗಮ ಗೊಳಿಸಿದರು. ಜೈಸ್ವಾಲ್, ಜಿತೇಶ್ ಶರ್ಮ ವಿಕೆಟ್ ಪಡೆದ ಆಫ್ಘನ್ ತಿರುಗೇಟು ನೀಡಲು ಯತ್ನಿಸಿತು, ಆದರೆ ಶಿವಂ ದುಬೆ ಹಾಗೂ ರಿಂಕು ಸಿಂಗ್ (9*) ಗೆಲುವಿನ ದಡ ಸೇರಿಸಿದರು.

ರೋಹಿತ್ ಮತ್ತೆ ನಿರಾಸೆ

ಸವಾಲಿನ ಮೊತ್ತ ಬೆನ್ನತ್ತಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (0) ವಿಕೆಟ್ ಕಳೆದುಕೊಂಡಿತು. ತಾನೆದುರಿಸಿದ ಮೊದಲ ಎಸೆತದಲ್ಲಿ ಬೌಲ್ಡ್ ಆದ ರೋಹಿತ್ ಪುನರಾಗಮನ ಸರಣಿಯಲ್ಲಿ ಸತತ 2ನೇ ಬಾರಿಗೆ ಸೊನ್ನೆ ಸುತ್ತಿದರು. ಬಳಿಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಜತೆಯಾದ ಅನುಭವಿ ವಿರಾಟ್ ಕೊಹ್ಲಿ (29) ತಂಡಕ್ಕೆ ಚೇತರಿಕೆ ಒದಗಿಸಿದರು. ಇವರಿಬ್ಬರು 2ನೇ ವಿಕೆಟ್​ಗೆ 28 ಎಸೆತಗಳಲ್ಲಿ 57 ರನ್​ಗಳಿಸಿದರು. ಮೊದಲ ಆರು ಓವರ್​ಗಳಲ್ಲಿ 69 ರನ್ ಕಲೆಹಾಕಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಿತು.

ಗುಲ್ಬಾದಿನ್ ನೈಬ್ ಅರ್ಧಶತಕ

ರಹಮಾನುಲ್ಲಾ ಗುರ್ಬಜ್ (14) ಹಾಗೂ ನಾಯಕ ಇಬ್ರಾಹಿಂ ಜದ್ರಾನ್ (8) ಜೋಡಿಗೆ ಸ್ಪಿನ್ನರ್ ರವಿ ಬಿಷ್ಣೋಯಿ ಬ್ರೇಕ್ ಹಾಕಿದರು. ಇವರಿಬ್ಬರು ಮೊದಲ ವಿಕೆಟ್​ಗೆ 20 ರನ್​ಗಳಿಸಿದರು. ನಂತರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಗುಲ್ಬಾದಿನ್ ನೈಬ್, ಇಬ್ರಾಹಿಂ ಜತೆಗೂಡಿ 2ನೇ ವಿಕೆಟ್​ಗೆ 33 ರನ್ ಪೇರಿಸಿ ಆರಂಭಿಕ ಆಘಾತದಿಂದ ಚೇತರಿಕೆ ನೀಡಿದರು. ಆದರೆ, ಭಾರತೀಯ ಬೌಲರ್​ಗಳನ್ನು ದಂಡಿಸಿದ ಗುಲ್ಬಾದಿನ್ ನೈಬ್ ತಂಡಕ್ಕೆ ಆಸರೆಯಾದರು. ಅಜ್ಮತ್ ಒರ್ಮಜಾಯಿ (2) ವಿಕೆಟ್ ಪಡೆದ ಶಿವಂ ದುಬೆ ಆಫ್ಘನ್​ಗೆ ಪೆಟ್ಟು ನೀಡಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಗುಲ್ಬಾದಿನ್ 28 ಎಸೆತದಲ್ಲಿ ಅರ್ಧಶತಕ ಸಿಡಿಸಿ ತಂಡದ ಮೊತ್ತ ಏರಿಸಿದರು. ಇವರಿಗೆ 12ನೇ ಓವರ್​ನಲ್ಲಿ ಅಕ್ಷರ್ ಪಟೇಲ್ ಡಗೌಟ್ ದಾರಿ ತೋರಿದರು. ಮಧ್ಯಮ ಕ್ರಮಾಂಕದಲ್ಲಿ ನಜಿಬುಲ್ಲಾ ಜದ್ರಾನ್ (23) ಹಾಗೂ ಕರೀಂ ಜನ್ನತ್ (21) ಉಪಯುಕ್ತ ಕೊಡುಗೆ ನೀಡಿದರು. ಇವರಿಬ್ಬರು 6ನೇ ವಿಕೆಟ್​ಗೆ 30 ರನ್ ಕಸಿದರು. ಕೆಳಸರದಿಯಲ್ಲಿ ಮುಜೀಬ್ ಉರ್ ರಹಮಾನ್ (21) ಬಿರುಸಿನ ಬ್ಯಾಟಿಂಗ್ ನಡೆಸಿ ತಂಡವನ್ನು 170ರ ಗಡಿ ದಾಟಿಸಿದರು. ಎಡಗೈ ವೇಗಿ ಅರ್ಷದೀಪ್ ಸಿಂಗ್ (32ಕ್ಕೆ 3) ಕೊನೆಯಲ್ಲಿ ಆಫ್ಘನ್​ಗೆ ಕಡಿವಾಣ ಹೇರಿದರು.

14 ತಿಂಗಳ ಬಳಿಕ ಕೊಹ್ಲಿ ವಾಪಸ್

2022 ನವೆಂಬರ್ 10ರಂದು ಕೊನೆಯದಾಗಿ ಟೀಮ್ ಇಂಡಿಯಾ ಪರ ಟಿ20 ಪಂದ್ಯವನ್ನಾಡಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, 14 ತಿಂಗಳ ಬಳಿಕ ಭಾರತ ಟಿ20 ತಂಡಕ್ಕೆ ಪುನರಾಗಮನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net