

ಚೆನ್ನೈ: ಹಾಲಿ ಚಾಂಪಿಯನ್ ಜೈಪುರ ಪಿಂಕ್‌ಪ್ಯಾಂಥರ್ಸ್ ಮತ್ತು ದಬಾಂಗ್ ದೆಹಲಿ ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಬುಧವಾರ ನಡೆದ ಪಂದ್ಯ 32-32 ಅಂಕಗಳಿಂದ ರೋಚಕ ಟೈಗೊಂಡಿದೆ. ಇದು ಹಾಲಿ ಆವೃತ್ತಿಯ 3ನೇ ಟೈ ಆಗಿದೆ.
ಚೆನ್ನೈ ಚರಣದ ಕೊನೇ ದಿನದ ಮೊದಲ ಪಂದ್ಯದ ಮೊದಲಾರ್ಧದಲ್ಲಿ ಜೈಪುರ ತಂಡವನ್ನು 2 ಬಾರಿ ಆಲೌಟ್ ಬಲೆಗೆ ಬೀಳಿಸಿದ ದೆಹಲಿ ತಂಡ 23-11ರಿಂದ ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ದೆಹಲಿ ತಂಡವನ್ನು ಆಲೌಟ್ ಮಾಡುವ ಮೂಲಕ ತಿರುಗೇಟು ನೀಡಿದ ಜೈಪುರ ತಂಡ ಅಂಕ ಹಂಚಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಅರ್ಜುನ್ ದೇಸ್ವಾಲ್ (13) ಯಶಸ್ವಿ ರೈಡಿಂಗ್‌ಗಳ ಮೂಲಕ ಜೈಪುರ ತಂಡ ಟೈ ಸಾಧಿಸಲು ನೆರವಾದರು. ಜೈಪುರ ಪರ ಡಿೆಂಡಿಂಗ್‌ನಲ್ಲಿ ಅಂಕುಶ್ (7) ಮಿಂಚಿದರು. ದೆಹಲಿ ನಾಯಕ ನವೀನ್ ಕುಮಾರ್ (4) ಅವರು 4 ಯಶಸ್ವಿ ರೈಡಿಂಗ್‌ಗಳ ಬಳಿಕ ಕೋರ್ಟ್‌ನಿಂದ ನಿರ್ಗಮಿಸಿದರು. ನಂತರ ಅಶು ಮಲಿಕ್ (7) ದೆಹಲಿ ರೈಡಿಂಗ್ ವಿಭಾಗಕ್ಕೆ ಬಲ ತುಂಬಿದರು. ದೆಹಲಿ ದ್ವಿತೀಯಾರ್ಧದಲ್ಲಿ ಕೇವಲ 9 ಅಂಕ ಕಲೆಹಾಕಿ ನೀರಸ ಪ್ರದರ್ಶನ ತೋರಿತು.
ತಲೈವಾಸ್‌ಗೆ ತವರಿನಲ್ಲಿ ಗೆಲುವಿಲ್ಲ: ತಮಿಳು ತಲೈವಾಸ್ ತಂಡ ತವರು ಚರಣದಲ್ಲಿ ಆಡಿದ ಎಲ್ಲ 4 ಪಂದ್ಯಗಳಲ್ಲೂ ಸೋಲು ಅನುಭವಿಸಿತು. ದಿನದ 2ನೇ ಪಂದ್ಯದಲ್ಲಿ ತಲೈವಾಸ್ ತಂಡ 30-33ರಿಂದ ಗುಜರಾತ್ ಜೈಂಟ್ಸ್‌ಗೆ ಶರಣಾಯಿತು. ಗುರುವಾರ ಟೂರ್ನಿಯ ವಿಶ್ರಾಂತಿ ದಿನವಾಗಿದ್ದು, ಶುಕ್ರವಾರದಿಂದ ನೋಯ್ಡ ಚರಣದ ಪಂದ್ಯಗಳು ನಡೆಯಲಿವೆ.