ಜಡೇಜಾ 21ನೇ ಶತಮಾನದ ಮೌಲ್ಯಯುತ ಭಾರತೀಯ ಕ್ರಿಕೆಟಿಗ

Ravindra Jadeja
Published on

ನವದೆಹಲಿ: ಆಲ್ರೌಂಡರ್ ರವೀಂದ್ರ ಜಡೇಜಾ ಪ್ರತಿಷ್ಠಿತ ವಿಸ್ಡನ್ ಮ್ಯಾಗಝಿನ್‌ನಿಂದ 21ನೇ ಶತಮಾನದ ಭಾರತದ ಅತ್ಯಂತ ಮೌಲ್ಯಯುತ ಟೆಸ್ಟ್ ಕ್ರಿಕೆಟಿಗ (ಎಂವಿಪಿ) ಎಂದು ಹೆಸರಿಸಲ್ಪಟ್ಟಿದ್ದಾರೆ. 31 ವರ್ಷದ ಜಡೇಜಾ 97.3 ಎಂವಿಪಿ ರೇಟಿಂಗ್ ಗಳಿಸಿದ್ದಾರೆ. ಈ ಮೂಲಕ ವಿಶ್ವದಲ್ಲಿ ಅವರಿಗೆ ಎರಡನೇ ಸ್ಥಾನ ಲಭಿಸಿದೆ. ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದಾರೆ.

‘ಭಾರತ ತಂಡದ ಪರ ಆಡುವುದೇ ನನ್ನ ಕನಸಾಗಿತ್ತು. ಅದರಲ್ಲೂ ಮೌಲ್ಯಯುತ ಆಟಗಾರ ಎನಿಸಿಕೊಂಡಿದ್ದು ಹೆಚ್ಚು ಖುಷಿಯ ವಿಚಾರ’ ಎಂದು ಜಡೇಜಾ ಪ್ರತಿಕ್ರಿಯಿಸಿದ್ದಾರೆ. ತಂಡದ ಸಹ-ಆಟಗಾರರು, ಸಹಾಯಕ ಸಿಬ್ಬಂದಿ, ಅಭಿಮಾನಿಗಳಿಗೆ ಧನ್ಯವಾದಗಳು. ಅವರ ಪ್ರೋತ್ಸಾಹದಿಂದಲೇ ನನಗೆ ಈ ಗೌರವ ದಕ್ಕಿದೆ ಎಂದು ಜಡೇಜಾ ಹೇಳಿದ್ದಾರೆ.

2012ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜಡೇಜಾ, ಇದುವರೆಗೆ 49 ಟೆಸ್ಟ್ ಪಂದ್ಯಗಳಲ್ಲಿ ಏಕೈಕ ಶತಕ, 14 ಅರ್ಧಶತಕಗಳ ಸಹಿತ 1,869 ರನ್ ಪೇರಿಸಿದ್ದಾರೆ ಮತ್ತು 213 ವಿಕೆಟ್ ಕಬಳಿಸಿದ್ದಾರೆ. ಕ್ರಿಕ್ ವಿಜ್ ಮಾಹಿತಿಯ ವಿಶ್ಲೇಷಣೆಯಂತೆ, ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗರನ್ನು ‘ಎಂವಿಪಿ ರೇಟಿಂಗ್’ಗೆ ಒಳಪಡಿಸಿ, ಪಂದ್ಯದ ಮೇಲೆ ಅವರ ಪರಿಣಾಮದ ಬಗ್ಗೆ ಸಾಂಖ್ಯಿಕವಾಗಿ ಲೆಕ್ಕಾಚಾರ ಹಾಕಲಾಗುತ್ತದೆ. ‘ಭಾರತದ ನಂ.1 ಆಟಗಾರನಾಗಿ ಜಡೇಜಾ ಹೆಸರು ನೋಡಿ ನಮಗೂ ಆಶ್ಚರ್ಯವಾಯಿತು. ಅವರು ತಂಡಕ್ಕೆ ಕಾಯಂ ಆಯ್ಕೆಯ ಆಟಗಾರನಲ್ಲ. ಆದರೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿದಾಗಲೆಲ್ಲ ಮುಂಚೂಣಿ ಬೌಲರ್ ಆಗಿ ಮಿಂಚಿದ್ದಾರೆ ಮತ್ತು 6ನೇ ಕ್ರಮಾಂಕದ ಬ್ಯಾಟಿಂಗ್‌ನಲ್ಲೂ ಉತ್ತಮ ನಿರ್ವಹಣೆ ತೋರಿದ್ದಾರೆ. ಆಡಿದ ಪಂದ್ಯಗಳಲ್ಲಿ ಅವರಿಂದ ಹೆಚ್ಚು ಕೊಡುಗೆ ಬಂದಿರುತ್ತದೆ’ ಎಂದು ಕ್ರಿಕ್ ವಿಜ್‌ನ ್ರೆಡ್ಡಿ ವಿಲ್ಡ್ ಅಭಿಪ್ರಾಯಪಟ್ಟಿದ್ದಾರೆ. ಸಾವಿರ ರನ್ ಹಾಗೂ 150 ವಿಕೆಟ್ ಕಬಳಿಸಿರುವ ಆಟಗಾರರಲ್ಲಿ ಜಡೇಜಾ, ಬ್ಯಾಟಿಂಗ್-ಬೌಲಿಂಗ್ ಸರಾಸರಿಗಳಲ್ಲಿ 2ನೇ ಅತ್ಯುತ್ತಮ 10.62 ರನ್‌ಗಳ ಅಂತರ ಹೊಂದಿದ್ದಾರೆ ಎಂದವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net