ಚೊಚ್ಚಲ ಪ್ರಶಸ್ತಿ ಮೇಲೆ ಆಸೀಸ್-ಕಿವೀಸ್ ಕಣ್ಣು ; ಇಂದು ಟಿ20 ವಿಶ್ವಕಪ್ ಫೈನಲ್ ಪಂದ್ಯ

nz and aus t20 wc final match FOR WEB
Published on

ದುಬೈ: ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಭಾನುವಾರ ಹೋರಾಡಲಿವೆ. ಸಾಂಪ್ರದಾಯಿಕ ಎದುರಾಳಿಗಳಾದ ಉಭಯ ತಂಡಗಳು ಸೆಮಿಫೈನಲ್ ಪಂದ್ಯಗಳಲ್ಲಿ ರೋಚಕ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೇರಿವೆ. ನ್ಯೂಜಿಲೆಂಡ್ ತಂಡ ಮೊದಲ ಬಾರಿಗೆ ಫೈನಲ್‌ಗೇರಿದ್ದರೆ, ಆಸೀಸ್ ತಂಡಕ್ಕೆ ಎರಡನೇ ಯತ್ನ ಇದಾಗಿದೆ. ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್ ಆಗಿದ್ದರೂ ಆಸ್ಟ್ರೇಲಿಯಾ ಪಾಲಿಗೆ ಇದುವರೆಗೂ ಚುಟುಕು ಕ್ರಿಕೆಟ್ ಪ್ರಶಸ್ತಿ ಒಲಿದಿಲ್ಲ. 5 ತಿಂಗಳ ಹಿಂದಷ್ಟೇ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದಿರುವ ನ್ಯೂಜಿಲೆಂಡ್, ಸತತ ಎರಡನೇ ಐಸಿಸಿ ಟ್ರೋಫಿ ಗೆಲುವಿನ ಹಂಬಲದಲ್ಲಿದೆ. ಟಿ20 ಇತಿಹಾಸದಲ್ಲಿ ನ್ಯೂಜಿಲೆಂಡ್ ಎದುರು ಆಸ್ಟ್ರೇಲಿಯಾ ತಂಡವೇ ಮೇಲುಗೈ ಸಾಧಿಸಿದೆ. 2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಡೇ ಬಾರಿಗೆ ಕಿವೀಸ್ ತಂಡ ಆಸೀಸ್ ತಂಡವನ್ನು ಸೋಲಿಸಿತ್ತು. ಬಹುತೇಕ ಆಸ್ಟ್ರೇಲಿಯಾ ತಂಡವೇ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ.

* ಕಿವೀಸ್‌ಗೆ ಸೇಡಿನ ತವಕ

2015ರ ಏಕದಿನ ವಿಶ್ವಕಪ್‌ನಲ್ಲಿ ಕಿವೀಸ್ ತಂಡ ಹೀನಾಯವಾಗಿ ಆಸೀಸ್‌ಗೆ ಶರಣಾಗಿತ್ತು. ಇದೀಗ ನ್ಯೂಜಿಲೆಂಡ್ ತಂಡಕ್ಕೆ ಸೇಡು ತೀರಿಸಿಕೊಳ್ಳುವುದರ ಜತೆಗೆ ಚೊಚ್ಚಲ ಚುಟುಕು ಪ್ರಶಸ್ತಿ ಜಯಿಸುವ ಅವಕಾಶ ಲಭಿಸಿದೆ. ಗುಂಪಿನ ಹಂತದಲ್ಲಿ ಎರಡನೇ ಸ್ಥಾನಿಯಾಗಿ ಸೆಮೀಸ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೇರಿದೆ. ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಕೇನ್ ವಿಲಿಯಮ್ಸನ್ ಪಡೆಗೆ ಗಾಯದ ಸಮಸ್ಯೆ ಎದುರಾಗಿದೆ. ವಿಕೆಟ್ ಕೀಪರ್ ಡೆವೊನ್ ಕಾನ್‌ವೇ ಗಾಯದ ಸಮಸ್ಯೆಯಿಂದ ಅಲಭ್ಯರಾಗುತ್ತಿದ್ದು, ಬದಲಿಗೆ ಟಿಮ್ ಸೀಫರ್ಟ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಮಾರ್ಟಿನ್ ಗುಪ್ಟಿಲ್, ಡೆರಿಲ್ ಮಿಚೆಲ್, ಜಿಮ್ಮಿ ನೀಶಾಮ್, ವಿಲಿಯಮ್ಸನ್, ಗ್ಲೆನ್ ಫಿಲಿಪ್ಸ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಇಶ್ ಸೋಧಿರಂಥ ಬೌಲರ್‌ಗಳು ಎದುರಾಳಿ ತಂಡಕ್ಕೆ ಕಂಕಟವಾಗಬಲ್ಲರು.

* ಆತ್ಮವಿಶ್ವಾಸದಲ್ಲಿ ಆಸೀಸ್

2015ರ ಏಕದಿನ ವಿಶ್ವಕಪ್ ಬಳಿಕ ಐಸಿಸಿ ಟ್ರೋಫಿ ಜಯಿಸಲು ವಿಫಲವಾಗಿರುವ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಎದುರಾಳಿ ಕಿವೀಸ್ ಎದುರು ಉತ್ತಮ ದಾಖಲೆ ಹೊಂದಿದ್ದು, ಗೆಲುವಿನ ಉತ್ಸಾಹದಲ್ಲಿದೆ. ಡೇವಿಡ್ ವಾರ್ನರ್ ಲಯಕ್ಕೆ ಮರಳಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಮಾರ್ಕಸ್ ಸ್ಟೋಯಿನಿಸ್, ಸೆಮಿಫೈನಲ್ ಹೀರೋ ಮ್ಯಾಥ್ಯೂ ವೇಡ್ ಉತ್ತಮ ಲಯದಲ್ಲಿದ್ದರೆ, ಅನುಭವಿಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಸ್ಟೀವನ್ ಸ್ಮಿತ್ ಇದುವರೆಗೂ ಸ್ಫೋಟಿಸಿಲ್ಲ. ಬೌಲಿಂಗ್ ವಿಭಾಗದಲ್ಲಿ ಆಡಂ ಜಂಪಾ ಕೊಂಚ ದುಬಾರಿಯಾಗುತ್ತಿದ್ದರೆ, ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಹಾಗೂ ಜೋಸ್ ಹ್ಯಾಸಲ್‌ವುಡ್ ಕಿವೀಸ್‌ಗೆ ಕಡಿವಾಣ ಹಾಕಬಲ್ಲರು.

ಟೀಮ್ ನ್ಯೂಸ್:

ಆಸ್ಟ್ರೇಲಿಯಾ: ಸೆಮಿಫೈನಲ್‌ನಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ರನ್‌ಗಳಿಸಲು ಪರದಾಡುತ್ತಿರುವ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್ ಬದಲಾವಣೆ ಕಷ್ಟಕರ. 6ನೇ ಬೌಲರ್ ಹಿತದೃಷ್ಟಿಯಿಂದ ಈ ಜೋಡಿ ಅನಿವಾರ್ಯ.

ಸಂಭಾವ್ಯ ತಂಡ:

ಆಸೀಸ್: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಮ್ಯಾತ್ಯೂ ವೇಡ್ (ವಿಕೀ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಸ್ ಹ್ಯಾಸಲ್‌ವುಡ್.

ನ್ಯೂಜಿಲೆಂಡ್: ಗಾಯಾಳು ವಿಕೆಟ್ ಕೀಪರ್ ಡೆವೊನ್ ಕಾನ್‌ವೇ ಬದಲಿಗೆ ಟಿಮ್ ಸೀರ್ಟ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐವರು ಪೂರ್ಣ ಪ್ರಮಾಣದ ಬೌಲರ್‌ಗಳೊಂದಿಗೆ ನೀಶಾಮ್ 6ನೇ ಬೌಲರ್ ಆಗಲಿದ್ದಾರೆ.

ಸಂಭಾವ್ಯ ತಂಡ:

ಕಿವೀಸ್: ಮಾರ್ಟಿನ್ ಗುಪ್ಟಿಲ್, ಡೆರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸಿರ್ಟ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಾಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಂ ಮಿಲ್ನೆ, ಟ್ರೆಂಟ್ ಬೌಲ್ಟ್, ಇಶ್ ಸೋಧಿ.

* ಆಸ್ಟ್ರೇಲಿಯಾ ಅಜೇಯ ಸಾಧನೆ

ಆಸ್ಟ್ರೇಲಿಯಾ ತಂಡ ನಾಕೌಟ್ ಹಂತದ ಪಂದ್ಯಗಳಲ್ಲಿ ಇದುವರೆಗೂ ನ್ಯೂಜಿಲೆಂಡ್ ಎದುರು ಅಜೇಯ ಸಾಧನೆ ಮಾಡಿದೆ. ಇದುವರೆಗೂ ವಿವಿಧ ಟೂರ್ನಿಗಳಲ್ಲಿ ನಡೆದಿರುವ 16 ಪಂದ್ಯಗಳಲ್ಲೂ ಆಸೀಸ್ ತಂಡವೇ ಜಯ ದಾಖಲಿಸಿದೆ. ಐಸಿಸಿ ಟೂರ್ನಿಗಳಲ್ಲಿ ಇದುವರೆಗೂ ಎದುರಾಗಿರುವ 4 ನಾಕೌಟ್ ಪಂದ್ಯಗಳಲ್ಲೂ ಆಸೀಸ್ ಅಜೇಯ ಸಾಧನೆ ಮಾಡಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 14, ಆಸ್ಟ್ರೇಲಿಯಾ: 9, ನ್ಯೂಜಿಲೆಂಡ್: 5

ಟಿ20 ವಿಶ್ವಕಪ್‌ನಲ್ಲಿ: 1, ಆಸ್ಟ್ರೇಲಿಯಾ: 0, ನ್ಯೂಜಿಲೆಂಡ್: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net