

ದುಬೈ: ಐಪಿಎಲ್-13ರಲ್ಲಿ ಶುಕ್ರವಾರ ಹಳೆ ಬೇರು-ಹೊಸ ಚಿಗುರಿನ ಮುಖಾಮುಖಿಯಾಗಲಿದೆ. ಅನುಭವಿ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಅನನುಭವಿ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿವೆ.
ಬ್ಯಾಟಿಂಗ್‌ನಲ್ಲಿ ಹಿಂಬಡ್ತಿ ವಿಚಾರಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿರುವ ಧೋನಿ ಪಾಲಿಗೆ ಈ ಪಂದ್ಯ ವೈಯಕ್ತಿಕವಾಗಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಟೂರ್ನಿ ಆರಂಭಗೊಂಡ ವಾರದ ಒಳಗಾಗಿ 3ನೇ ಹೋರಾಟಕ್ಕೆ ಸಜ್ಜಾಗಿರುವ ಹಿರಿಯ ಆಟಗಾರರ ಸಿಎಸ್‌ಕೆ ತಂಡ ಗೆಲುವಿನ ಹಾದಿಗೆ ಮರಳುವ ಭರವಸೆಯಲ್ಲಿದೆ. ಮತ್ತೊಂದೆಡೆ ಬಹುತೇಕ ಯುವ ಆಟಗಾರರಿಂದ ತುಂಬಿರುವ ಡೆಲ್ಲಿ ಲೀಗ್ ಆರಂಭದಲ್ಲೇ ಗಾಯದ ಸಮಸ್ಯೆ ಎದುರಿಸಿದ್ದು, ಗೆಲುವಿನ ಲಯ ಕಾಯ್ದುಕೊಳ್ಳುವ ಹುರುಪಿನಲ್ಲಿದೆ.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ದಾಖಲಿಸಿದರೂ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಿಎಸ್‌ಕೆ ಶರಣಾಗಿತ್ತು. ಜತೆಗೆ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿ, ಮಂದಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಕಡೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರೂ ಸಿಎಸ್‌ಕೆ ಸೋಲನುಭವಿಸಿತ್ತು. ಆರಂಭಿಕನಾಗಿ ಮುರಳಿ ವಿಜಯ್ ಎರಡೂ ಪಂದ್ಯಗಳಲ್ಲೂ ವಿಫಲರಾಗಿದ್ದಾರೆ.
ಮತ್ತೊಂದೆಡೆ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲು ತಪ್ಪಿಸಿಕೊಂಡಿರುವ ಡೆಲ್ಲಿ ತಂಡ ಮತ್ತೊಂದು ಜಯದ ವಿಶ್ವಾಸದಲ್ಲಿದೆ. ರಿಕಿ ಪಾಂಟಿಂಗ್ ಮಾರ್ಗದರ್ಶನದ ಡೆಲ್ಲಿ ಬಲಿಷ್ಠ ಚೆನ್ನೈ ಸವಾಲಿಗೆ ಸನ್ನದ್ಧವಾಗಿದೆ. ಕಳೆದ ಪಂದ್ಯದ ಹೀರೋ ಮಾರ್ಕಸ್ ಸ್ಟೋಯಿನಿಸ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಮೊದಲ ಪಂದ್ಯದ ವೇಳೆ ಗಾಯಗೊಂಡಿದ್ದ ಆರ್. ಅಶ್ವಿನ್ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ. ಇಶಾಂತ್ ಶರ್ಮ ಕೂಡ ಕಣಕ್ಕಿಳಿಯುತ್ತಿಲ್ಲ. ಪೃಥ್ವಿ ಷಾ, ಶಿಖರ್ ಧವನ್, ಶ್ರೇಯಸ್, ರಿಷಭ್ ಪಂತ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೆ ಅನುಭವಿ ಅಜಿಂಕ್ಯ ರಹಾನೆ ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಟೂರ್ನಿಯಲ್ಲಿ ಇದುವರೆಗೂ ಚೆನ್ನೈ ತಂಡವೇ ಮೇಲುಗೈ ಸಾಧಿಸಿದರೂ ಯುವ ಪಡೆಯನ್ನೇ ಹೊಂದಿರುವ ಡೆಲ್ಲಿ ತಂಡವನ್ನು ಕಡೆಗಣಿಸುವಂತಿಲ್ಲ.
ಟೀಮ್ ನ್ಯೂಸ್:
ಚೆನ್ನೈ ಸೂಪರ್‌ಕಿಂಗ್ಸ್: ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಎದುರು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಂಬಟಿ ರಾಯುಡು ಡೆಲ್ಲಿ ವಿರುದ್ಧವೂ ಕಣಕ್ಕಿಳಿಯುತ್ತಿಲ್ಲ. ಹೀಗಾಗಿ ಪದಾರ್ಪಣೆ ಪಂದ್ಯದಲ್ಲೇ ವಿಲರಾದ ಋತುರಾಜ್ ಗಾಯಕ್ವಾಡ್‌ಗೆ ಮತ್ತೊಂದು ಅವಕಾಶ ಸಿಗಲಿದೆ. ರಾಜಸ್ಥಾನ ರಾಯಲ್ಸ್ ಕಡೇ ಓವರ್‌ನಲ್ಲಿ 30 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಲುಂಗಿ ಎನ್‌ಗಿಡಿ ಬದಲಿಗೆ ಜೋಶ್ ಹ್ಯಾಸಲ್‌ವುಡ್ ಆಡಬಹುದು. ಸತತ 2 ಪಂದ್ಯಗಳಲ್ಲಿ ವಿಲರಾಗಿರುವ ಕೇದಾರ್ ಜಾಧವ್ ಬದಲಿಗೆ ಕರ್ಣ್ ಶರ್ಮರನ್ನು ಸೇರಿಸಿ ಬೌಲಿಂಗ್ ವಿಭಾಗ ಬಲಪಡಿಸಬಹುದು.
ಸಂಭಾವ್ಯ ತಂಡ: ಮುರಳಿ ವಿಜಯ್, ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಸ್ಯಾಮ್ ಕರ‌್ರನ್, ಎಂಎಸ್ ಧೋನಿ (ನಾಯಕ, ವಿಕೀ), ಋತುರಾಜ್ ಗಾಯಕ್ವಾಡ್, ಕೇದಾರ್ ಜಾಧವ್/ಕರ್ಣ್ ಶರ್ಮ, ರವೀಂದ್ರ ಜಡೇಜಾ, ಪೀಯುಷ್ ಚಾವ್ಲ, ದೀಪಕ್ ಚಹರ್, ಲುಂಗಿ ಎನ್‌ಗಿಡಿ/ಜೋಶ್ ಹ್ಯಾಸಲ್‌ವುಡ್.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ವಿರುದ್ಧ 16 ರನ್ ಸೋಲು.
ಡೆಲ್ಲಿ ಕ್ಯಾಪಿಟಲ್ಸ್: ಮೊದಲ ಪಂದ್ಯದ ಗೆಲುವಿನ ಕಾಂಬಿನೇಷನ್ ಬದಲಾವಣೆ ಸಾಧ್ಯತೆ ಕಡಿಮೆ. ಆದರೆ ಆರ್.ಅಶ್ವಿನ್ ಫಿಟ್ ಆಗದಿದ್ದರೆ ಅನುಭವಿ ಅಮಿತ್ ಮಿಶ್ರಾ ಸ್ಥಾನ ತುಂಬಲಿದ್ದಾರೆ. ಒಂದು ವೇಳೆ ಅಶ್ವಿನ್ ಫಿಟ್ ಆದರೆ ಅಕ್ಷರ್ ಪಟೇಲ್ ಬದಲಿಗೆ ಅಮಿತ್ ಮಿಶ್ರಾ ಆಡಬಹುದು. ಅನುಭವಿ ವೇಗಿ ಇಶಾಂತ್ ಶರ್ಮ ಅಭ್ಯಾಸಕ್ಕಿಳಿದರೂ ಬೌಲಿಂಗ್ ಮಾಡಲಿಲ್ಲ. ಇದರಿಂದ ಇಶಾಂತ್ ಲಭ್ಯತೆ ಖಚಿತವಾಗಿಲ್ಲ. ಮೊದಲ ಪಂದ್ಯದಲ್ಲಿ ವಿಫಲರಾದರೂ ಶಿಮ್ರೋನ್ ಹೆಟ್ಮೆಯೆರ್‌ಗೆ ಮತ್ತೊಂದು ಅವಕಾಶ ನೀಡಬಹುದು. ಉಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.
ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೀ), ಮಾರ್ಕಸ್ ಸ್ಟೋಯಿನಿಸ್, ಅಕ್ಷರ್ ಪಟೇಲ್, ಅಶ್ವಿನ್/ಅಮಿತ್ ಮಿಶ್ರಾ, ಕಗಿಸೊ ರಬಾಡ, ಆನ್ರಿಚ್ ನೋರ್ಜೆ, ಮೋಹಿತ್ ಶರ್ಮ.
ಕಳೆದ ಪಂದ್ಯ: ಪಂಜಾಬ್ ವಿರುದ್ಧ ಸೂಪರ್ ಓವರ್‌ನಲ್ಲಿ ಜಯ.
ಪಂದ್ಯ ಆರಂಭ: ರಾತ್ರಿ: 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 21
ಸಿಎಸ್‌ಕೆ: 15
ಡೆಲ್ಲಿ: 6