

ಚಿಕ್ಕಬಳ್ಳಾಪುರ : ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ವಿಶ್ವೇಶ್ವರಯ್ಯ ಡೈಮಂಡ್ಸ್
ಕ್ಲಬ್ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ,
ನಿರಂತರವಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸದಾ ಲವಲವಿಕೆಯಿಂದ ಇರುತ್ತಾರೆ. ಆರೋಗ್ಯದಲ್ಲೂ ಸದೃಢತೆ ಹೊಂದಿರುತ್ತಾರೆ ಎಂದರು.
ಕ್ರೀಡೆಗಳು ಉತ್ಸಾಹ, ಛಲ ಬೆಳೆಸುವುದರ ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುತ್ತವೆ. ಇದಕ್ಕೆ ಪ್ರತಿಯೊಬ್ಬರು ಕ್ರೀಡೆಗೆ ಸಮಯ ಮೀಸಲಿಡಬೇಕು. ಸ್ಪರ್ಧೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಬಹಳಷ್ಟು ಮಂದಿ ಕೀಳರಿಮೆಯಿಂದ ಕ್ರೀಡೆಗಳಲ್ಲಿ ಭಾಗವಹಿಸುವುದಿಲ್ಲ. ಜತೆಗೆ ಪಾಲಕರು ಭವಿಷ್ಯ ರೂಪಿಸುವ ಆತಂಕದಲ್ಲಿ ಮಕ್ಕಳಿಗೆ ಆಟವಾಡಲು ತಡೆಯೊಡ್ಡುತ್ತಾರೆ. ಕೇವಲ ಓದಲು ಒತ್ತಡ ಹೇರುತ್ತಾರೆ. ಇದು ಮಗುವಿನಲ್ಲಿ ಅಡಗಿರುವ ಪ್ರತಿಭೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದಕ್ಕೆ ಶಿಕ್ಷಣ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕ್ರೀಡೆಗಳ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಬೇಕು ಎಂದು ಹೇಳಿದರು.
ಬಿಎಸ್‌ಎಫ್ ನಿವೃತ್ತ ಹವಾಲ್ದಾರ್‌ಗಳಾದ ಜಿ.ಮಂಜುನಾಥ್, ಭೈಯಪ್ಪರೆಡ್ಡಿ, ಷೇಕ್ ಅಬ್ದುಲ್ ಅವರನ್ನು ಸನ್ಮಾನಿಸಲಾಯಿತು.ವೈದ್ಯ ಡಾ ರಾಮು, ಸರ್ ಎಂ.ವಿ. ಸಂಚಾಲಕ ನರೇಂದ್ರ, ಪದಾಧಿಕಾರಿಗಳಾದ ಅನಿಲ್, ಅರುಣ್ ಕುಮಾರ್, ಪ್ರಕಾಶ್, ಎನ್.ಮಂಜುನಾಥ್ ಮತ್ತಿತರರು ಇದ್ದರು.