

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ರಣಜಿ ತಂಡ ನೀಡಬೇಕು ಎಂದು ಕೆಎಸ್‌ಸಿಎ ರಾಯಚೂರು ವಲಯ ಮಾಜಿ ಅಧ್ಯಕ್ಷ ಡಾ.ರಾಜು ಕುಳಗೇರಿ ಒತ್ತಾಯಿಸಿದರು.
೩೭೧ ಜೆ ಸ್ಥಾನಮಾನ ಹೊಂದಿರುವ ಪ್ರದೇಶದಲ್ಲಿ ಪ್ರತ್ಯೇಕ ರಣಜಿ ತಂಡ ರಚಿಸಬಹುದು ಎಂಬ ಕಾನೂನು ಜಾರಿಯಲ್ಲಿದೆ. ಕೆಎಸ್‌ಸಿಎಗೆ ಈ ಭಾಗದ ಸದಸ್ಯರು ಮನವಿ ಸಲ್ಲಿಸಿದ್ದು, ಮುಂಬರುವ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು. ರಣಜಿ ತಂಡಕ್ಕೆ ಬೇಕಿರುವ ಎಲ್ಲ ಸೌಲಭ್ಯ ಕಲಬುರಗಿಯಲ್ಲಿದೆ. ಈ ಭಾಗದ ಜನಪ್ರತಿನಿಧಿಗಳು ಆಸಕ್ತಿವಹಿಸಿ ಒತ್ತಡ ಹೇರಿದ್ದಲ್ಲಿ ಬೇಡಿಕೆಗೆ ಸ್ಪಂದನೆ ದೊರೆಯಲಿದೆ. ಹೀಗಾಗಿ ಕಲ್ಯಾಣ ಕರ್ಣಾಟಕ ಭಾಗದ ಶಾಸಕರು, ಸಚಿವರು ಹಾಗೂ ಸಂಸದರನ್ನು ಭೇಟಿಯಾಗಿ ಈ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ. ಬೆಂಗಳೂರು, ಮೈಸೂರು ಭಾಗದವರಿಗಿಂತ ನಮ್ಮಲ್ಲಿನ ಆಟಗಾರರು ಕ್ರಿಕೆಟ್‌ನಲ್ಲಿ ಅಪಾರ ಅನುಭವಿಗಳಿದ್ದಾರೆ. ನೇಮಕ ಮಾಡಿಕೊಳ್ಳುವಲ್ಲಿ ಅನ್ಯಾಯವಾಗುತ್ತಿದೆ. ಪ್ರತ್ಯೇಕ ತಂಡ ರಚಿಸಿದರೆ ಮಾತ್ರ ಈ ಭಾಗದ ಆಟಗಾರರಿಗೆ ನ್ಯಾಯ ಸಿಗಲಿದೆ ಎಂದರು.
ಮಹಾರಾಷ್ಟ್ರ, ಗುಜರಾತ್ ಸೇರಿ ಅನೇಕ ರಾಜ್ಯಗಳಲ್ಲಿ ಎರಡು ರಣಜಿ ತಂಡಗಳಿವೆ. ಈ ಮಾದರಿಯಲ್ಲಿ ರಾಜ್ಯದಲ್ಲೂ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.