

ನವದೆಹಲಿ: ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿ ಭರ್ಜರಿ ಫಾರ್ಮ್‌ನಲ್ಲಿ ಕಾಣಿಸಿಕೊಂಡ ಕರ್ನಾಟಕದ ಬ್ಯಾಟರ್ ಕರುಣ್ ನಾಯರ್ ಐಪಿಎಲ್ 18ನೇ ಆವೃತ್ತಿಯಲ್ಲೂ ಅದೇ ಲಯ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾಲ್ಯ ಸ್ನೇಹಿತ ಕೆಎಲ್ ರಾಹುಲ್ ಹಾಗೂ ನೂತನ ನಾಯಕ ಅಕ್ಷರ್ ಪಟೇಲ್ ಜತೆಗೂಡಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯುವ ಬಗ್ಗೆಯೂ ಉತ್ಸುಕರಾಗಿರುವುದಾಗಿ ಅವರು ತಿಳಿಸಿದ್ದಾರೆ.
‘ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನಹರಿಸಿ ದೇಶೀಯ ಟೂರ್ನಿಯಲ್ಲಿ ಆಡಿದ ರೀತಿಯಲ್ಲೇ ಐಪಿಎಲ್‌ನಲ್ಲೂ ಉತ್ತಮ ಆರಂಭ ಪಡೆಯುವ ಮೂಲಕ, ಟೂರ್ನಿ ಮುಂದುವರಿದಂತೆ ಮತ್ತಷ್ಟು ಉತ್ತಮ ಪ್ರದರ್ಶನ ತೋರಲು ಬಯಸುತ್ತೇನೆ’ ಎಂದು 33 ವರ್ಷದ ಕರುಣ್ ನಾಯರ್, ಮಾಧ್ಯಮ ಸಂವಾದವೊಂದರಲ್ಲಿ ಹೇಳಿದ್ದಾರೆ. ದೇಶೀಯ ಋತುವಿನ ಯಶಸ್ಸಿನ ಕಾರಣ ಬಿಚ್ಚಿಟ್ಟ ಕರುಣ್, ಪರಿಸ್ಥಿತಿಗೆ ತಕ್ಕಂತೆ ಇನಿಂಗ್ಸ್ ಕಟ್ಟುವ ಜತೆಗೆ ಹೊಡೆತಗಳ ಆಯ್ಕೆಯತ್ತ ಹೆಚ್ಚು ಗಮನ ಹರಿಸಿದೆ
ಅವುಗಳನ್ನು ಸರಿಯಾದ ಸಮಯದಲ್ಲಿ ಕಾರ್ಯಗತಗೊಳಿಸಿದ್ದು, ಹೆಚ್ಚಿನ ಆತ್ಮವಿಶ್ವಾಸ ವೃದ್ಧಿಸಿತು ಎಂದಿದ್ದಾರೆ. ‘ಕೆಎಲ್ (ರಾಹುಲ್) ಅವರೊಂದಿಗೆ ಮತ್ತೆ ಜತೆಗೂಡುತ್ತಿರುವುದು ರೋಮಾಂಚನಕಾರಿ ಎನಿಸಿದೆ. ನಾವು ಆರಂಭಿಕ ದಿನದಿಂದಲೂ ಒಟ್ಟಿಗೆ ಆಡುತ್ತಿದ್ದೇವೆ. ಕಳೆದ ಕೆಲವು ಋತುಗಳಲ್ಲಿ ಹಾಗೂ ಐಪಿಎಲ್‌ನಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ದೇಶೀಯ ಕ್ರಿಕೆಟ್ ಯಶಸ್ಸನ್ನು ಪುನರಾವರ್ತಿಸುವ ಮೂಲಕ ಡೆಲ್ಲಿ ತಂಡಕ್ಕೆ ಮೊದಲ ಪ್ರಶಸ್ತಿ ಗೆದ್ದುಕೊಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಕರುಣ್ ತಿಳಿಸಿದ್ದಾರೆ.
ಅಕ್ಷರ್ ಬಹುಮುಖ ಪ್ರತಿಭೆ
ಅಕ್ಷರ್ ಪಟೇಲ್ ಸುದೀರ್ಘವಾಗಿ ಡೆಲ್ಲಿ ತಂಡದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಉತ್ತಮ ನಾಯಕ ಎನಿಸಲಿದ್ದಾರೆ. ಜತೆಗೆ ಆಟದ,ಆಟಗಾರರ ಪರಿಸ್ಥಿತಿ ಮತ್ತು ಪಾತ್ರಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯಾಗಿದ್ದಾರೆ, ಅಕ್ಷರ್ ಬಹುಮುಖ ಪ್ರತಿಭೆ ಎಂದು ಡೆಲ್ಲಿ ತಂಡದ ನೂತನ ನಾಯಕನನ್ನು ಕರುಣ್ ಹೊಗಳಿದರು.
ಕೆಜಿಎಫ್ ಹಾಡಿನೊಂದಿಗೆ ಕರುಣ್ ಎಂಟ್ರಿ!
ಮುಂಬರುವ ಐಪಿಎಲ್ ಆವೃತ್ತಿಗೆ ಕರುಣ್ ನಾಯರ್ ಡೆಲ್ಲಿ ತಂಡ ಕೂಡಿಕೊಂಡಿರುವ ವೀಡಿಯೊವನ್ನು ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ. ಕೆಜಿಎ್ ಸಿನಿಮಾದ ಮ್ಯೂಸಿಕ್‌ನೊಂದಿಗೆ ಖಡಕ್ ಎಂಟ್ರಿ ನೀಡುವ ಕರುಣ್, ಬ್ಯಾಟ್ ಹಿಡಿದು ಯಶ್ ಅವರ ‘ಮಾನ್‌ಸ್ಟರ್’ ಡೈಲಾಗ್ ಹೊಡೆದಿದ್ದಾರೆ. ಕರುಣ್ ಮೂಲಬೆಲೆ ₹50 ಲಕ್ಷಕ್ಕೆ ಡೆಲ್ಲಿ ತಂಡ ಸೇರಿದ್ದಾರೆ. ಇದಕ್ಕೂ ಮುನ್ನ 2016-17ರಲ್ಲೂ ಡೆಲ್ಲಿ ತಂಡದ ಸದಸ್ಯರಾಗಿದ್ದರು.