ಇಂದು ಸನ್‌ರೈಸರ್ಸ್‌ ಹೈದರಾಬಾದ್ - ರಾಜಸ್ಥಾನ ರಾಯಲ್ಸ್ ಮುಖಾಮುಖಿ

sunrisers and rajasthan for web
Published on

ದುಬೈ: ಅರಬ್ ನಾಡಿನ ಆರಂಭಿಕ 2 ಪಂದ್ಯಗಳಲ್ಲಿ ಮಿಶ್ರ ಫಲಿತಾಂಶ ಕಂಡು, ಪ್ಲೇಆಫ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-14ರಲ್ಲಿ ಸೋಮವಾರ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ರಾಜಸ್ಥಾನ ರಾಯಲ್ಸ್ ಪಾಲಿಗೆ ಮಹತ್ವ ಪಡೆದಿದೆ. ಮತ್ತೊಂದೆಡೆ, ಈಗಾಗಲೆ 8 ಸೋಲು ಕಂಡಿರುವ ಸನ್‌ರೈಸರ್ಸ್‌ ತಂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದ್ದರೂ ಉಳಿದ ತಂಡಗಳ ಲೆಕ್ಕಾಚಾರವನ್ನು ಉಲ್ಟಾ ಮಾಡುವ ಸಾಮರ್ಥ್ಯ ಹೊಂದಿದೆ.

ಪುಟಿದೇಳುವ ವಿಶ್ವಾಸದಲ್ಲಿ ರಾಜಸ್ಥಾನ: ಲೀಗ್‌ನ 2ನೇ ಭಾಗದ ಮೊದಲ ಪಂದ್ಯದಲ್ಲಿ ಪಂಜಾಬ್ ಎದುರು ರೋಚಕ ಜಯ ದಾಖಲಿಸಿದ್ದ ರಾಜಸ್ಥಾನ ತಂಡ, 2ನೇ ಹಣಾಹಣಿಯಲ್ಲಿ ಡೆಲ್ಲಿ ತಂಡಕ್ಕೆ ಸುಲಭವಾಗಿ ಶರಣಾಗಿತ್ತು. ಬೌಲಿಂಗ್ ವಿಭಾಗದಲ್ಲಿ ಬೌಲರ್‌ಗಳು ಗಮನಾರ್ಹ ನಿರ್ವಹಣೆ ತೋರುತ್ತಿದ್ದರೂ ಬ್ಯಾಟಿಂಗ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಯಶಸ್ವಿ ಜೈಸ್ವಾಲ್, ಮಹಿಪಾಲ್ ಲೋಮ್ರರ್ ಪಂಜಾಬ್ ಎದುರು ಮಿಂಚಿದ್ದರೂ ಡೆಲ್ಲಿ ಎದುರು ನಿರಾಸೆ ಕಂಡಿದ್ದರು. ವಿದೇಶಿ ಆಟಗಾರರಾದ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಡೇವಿಡ್ ಮಿಲ್ಲರ್ ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿಲ್ಲ. ಆಲ್ರೌಂಡರ್‌ಗಳಾದ ರಿಯಾನ್ ಪರಾಗ್, ರಾಹುಲ್ ತೆವಾಟಿಯ ಕೂಡ ಮಿಂಚುತ್ತಿಲ್ಲ. ತಂಡಕ್ಕೆ ಬೌಲರ್‌ಗಳೇ ಆಧಾರಸ್ತಂಭವಾಗಿದ್ದಾರೆ. ಮುಸ್ತಾಫಿಜುರ್ ರೆಹಮಾನ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ ಒಳಗೊಂಡ ವೇಗಿಗಳ ಪಡೆದ ಗಮನಸೆಳೆಯುತ್ತಿದೆ. ಸ್ಪಿನ್ ಬೌಲರ್‌ಗಳಾದ ತಬರೇಜ್ ಶಮ್ಸಿ, ರಾಹುಲ್ ತೆವಾಟಿಯಾ ಕೂಡ ಉತ್ತಮ ನಿರ್ವಹಣೆ ತೋರುತ್ತಿದೆ. ರಾಜಸ್ಥಾನ ತಂಡ ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 5 ರಲ್ಲಿ ಸೋತು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪ್ಲೇಆ್ ಹಂತಕ್ಕೇರುವ ಸಲುವಾಗಿ ಉಳಿದ ಪಂದ್ಯಗಳನ್ನು ಮಾಡು ಇಲ್ಲವೆ ಮಡಿ ಮಾದರಿಯಲ್ಲಿ ಹೋರಾಡಬೇಕಿದೆ.

*ಪ್ರಯೋಗದ ನಿರೀಕ್ಷೆಯಲ್ಲಿ ಹೈದರಾಬಾದ್

ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸನ್‌ರೈಸರ್ಸ್‌ ತಂಡ ಕೆಲವೊಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ನಾಯಕ ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್, ಮನೀಷ್ ಪಾಂಡೆ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ ಪಂಜಾಬ್ ಎದುರು ಸಾಧಾರಣ 125 ರನ್ ಬೆನ್ನಟ್ಟಲು ವಿಫಲವಾಗಿತ್ತು. ಉತ್ತಮ ಬೌಲಿಂಗ್ ಪಡೆ ಹೊಂದಿದ್ದರೂ ಬ್ಯಾಟಿಂಗ್ ವಿಭಾಗದ ಗಣನೀಯ ವೈಫಲ್ಯದಿಂದ ಎನ್ನು 5 ಪಂದ್ಯಗಳು ಬಾಕಿ ಇರುವಂತೆಯೇ ಲೀಗ್‌ನಿಂದ ಹೊರದಬ್ಬಲ್ಪಟ್ಟಿದೆ. ಇದೀಗ ಪ್ಲೇಆಫ್ ತಲುಪುವ ಅವಕಾಶ ಕೈತಪ್ಪಿದರೂ ಕಡೇ ಹಂತದಲ್ಲಿ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ಮೂಲಕ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳುವ ಅವಕಾಶ ಹೊಂದಿದೆ. ಅಲ್ಲದೆ, ಕಡೇ ಹಂತದಲ್ಲಿ ಪ್ಲೇಆಫ್ ಪ್ರವೇಶಕ್ಕೆ ಅವಕಾಶವಿರುವ ಇತರ ತಂಡಗಳಿಗೂ ಅಡಚಣೆ ಮಾಡುವ ಅವಕಾಶ ಹೊಂದಿದೆ.

ಟೀಮ್ ನ್ಯೂಸ್:

ರಾಜಸ್ಥಾನ: ಎವಿನ್ ಲೆವಿಸ್ ಹಾಗೂ ಕ್ರಿಸ್ ಮಾರಿಸ್ ಪೂರ್ಣ ಪ್ರಮಾಣದಲ್ಲಿ ಫಿಟ್ ಆದರೆ, ಮಿಲ್ಲರ್, ಶಮ್ಸಿ ಹೊರಗುಳಿಯಲಿದ್ದಾರೆ.

ಸನ್‌ರೈಸರ್ಸ್‌: ಪ್ಲೇಆಫ್ ಹಾದಿಯಿಂದ ಹೊರಬಿದ್ದಿರುವ ಸನ್‌ರೈಸರ್ಸ್‌ ಕೆಲವೊಂದು ಬದಲಾವಣೆ ಮಾಡಬಹುದು. ಸತತ ವೈಫಲ್ಯ ಕಾಣುತ್ತಿರುವ ಮಾಜಿ ನಾಯಕ ಡೇವಿಡ್ ವಾರ್ನರ್ ಬದಲಿಗೆ ಜೇಸನ್ ರಾಯ್ ಕಣಕ್ಕಿಳಿಯಬಹುದು. ಕೇದಾರ್ ಜಾಧವ್ ಕೂಡ ಕೊಕ್ ಪಡೆಯಬಹುದು.

ಮುಖಾಮುಖಿ: 14, ಸನ್‌ರೈಸರ್ಸ್‌: 7, ರಾಜಸ್ಥಾನ : 7

ಹಿಂದಿನ ಮುಖಾಮುಖಿ: ರಾಜಸ್ಥಾನ ತಂಡಕ್ಕೆ 55 ರನ್ ಜಯ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪಂದ್ಯ ಆರಂಭ: ರಾತ್ರಿ 7.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net