

ಶಾರ್ಜಾ: ಸಿಎಸ್ಕೆ ತಂಡವನ್ನು ಸುಲಭವಾಗಿ ಮಣಿಸಿದ ಆತ್ಮವಿಶ್ವಾಸದಲ್ಲಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಐಪಿಎಲ್-13ರಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಎದುರಾಗಲಿವೆ. ನಾಯಕ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ಗೆ ಮರಳಿರುವುದರಿಂದ ಮತ್ತು ಕ್ರಿಸ್ ಮಾರಿಸ್ ಸೇರ್ಪಡೆಯಿಂದ ಬೌಲಿಂಗ್ ವಿಭಾಗ ಬಲಿಷ್ಠವಾಗಿರುವುದರಿಂದ ಆರ್ಸಿಬಿ ತಂಡ ಗೆಲುವಿನ ಲಯ ಕಾಯ್ದುಕೊಳ್ಳುವ ಹುರುಪಿನಲ್ಲಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಕೂದಲೆಳೆ ಅಂತರದ ಜಯ ದಾಖಲಿಸಿರುವ ಕೆಕೆಆರ್ ತಂಡ ಆರ್ಸಿಬಿಗೆ ಸವಾಲು ನೀಡಲು ಸಜ್ಜಾಗಿದೆ.
*ಆತ್ಮವಿಶ್ವಾಸದಲ್ಲಿ ಆರ್ಸಿಬಿ
ಚೆನ್ನೈ ತಂಡವನ್ನು 37 ರನ್ಗಳಿಂದ ಮಣಿಸಿದ ಆರ್ಸಿಬಿ, ಲೀಗ್ನಲ್ಲಿ ಇದುವರೆಗೆ ಆಡಿರುವ 6 ಪಂದ್ಯಗಳಿಂದ 4ರಲ್ಲಿ ಜಯ ದಾಖಲಿಸಿ, 2 ಸೋಲು ಕಂಡಿರುವ ಆರ್ಸಿಬಿ, ರನ್ರೇಟ್ ಸುಧಾರಿಸುವತ್ತ ಕೂಡ ಗಮನಹರಿಸಬೇಕಿದೆ. ಮೈನಸ್ನಲ್ಲಿರುವ ಆರ್ಸಿಬಿ, ಮುಂದಿನ ಪಂದ್ಯಗಳಲ್ಲಿ ಗೆಲುವಿನ ಜತೆಗೆ ರನ್ರೇಟ್ ಸುಧಾರಿಸುವುದು ಆರ್ಸಿಬಿ ಪಾಲಿಗೆ ಮಹತ್ವ ಪಡೆದಿದೆ. ಸಿಎಸ್ಕೆ ವಿರುದ್ಧ ಬಿರುಸಿನ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ಾರ್ಮ್ಗೆ ಮರಳಿರುವುದು ಸಮಧಾನಕರ ಸಂಗತಿ. ಯುವ ಬ್ಯಾಟ್ಸ್ಮನ್ ದೇವದತ್ ಪಡಿಕಲ್ ಉತ್ತಮ ಾರ್ಮ್ನಲ್ಲಿದ್ದರೆ, ಎಬಿ ಡಿವಿಲಿಯರ್ಸ್ ಹಾಗೂ ಆರನ್ ಫಿಂಚ್ ಸ್ಫೋಟಿಸಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್, ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್, ಇಸುರು ಉದಾನ. ನವದೀಪ್ ಸೈನಿ ಹಾಗೂ ವಾಷಿಂಗ್ಟನ್ ಸುಂದರ್ ಗಮನಾರ್ಹ ನಿರ್ವಹಣೆ ತೋರುತ್ತಿದ್ದಾರೆ. ಕ್ರಿಸ್ ಮಾರಿಸ್ ಆಗಮನದಿಂದಾಗಿ ಡೆತ್ ಓವರ್ನಲ್ಲಿ ಬೌಲಿಂಗ್ ಬಲಿಷ್ಠಗೊಂಡಂತಾಗಿದೆ.
* ಕೆಕೆಆರ್ಗೆ ಹ್ಯಾಟ್ರಿಕ್ ಗೆಲುವಿನ ಗುರಿ
ಸಿಎಸ್ಕೆ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆತ್ ಓವರ್ಗಳಲ್ಲಿ ಹಾಕಿದ ಕಡಿವಾಣದಿಂದ ಜಯ ದಾಖಲಿಸಿರುವ ಕೆಕೆಆರ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದ ಅಸ್ಥಿರ ಪ್ರದರ್ಶನ ತಂಡದ ನಿದ್ದೆಗೆಡಿಸಿದೆ. ಜತೆಗೆ ಸುನೀಲ್ ನಾರಾಯಣ್ ಬೌಲಿಂಗ್ ಶೈಲಿಗೆ ಮೊದಲ ಬಾರಿಗೆ ಎಚ್ಚರಿಕೆ ನೀಡಲಾಗಿದ್ದು, ಆಂಡ್ರೆ ರಸೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಆರ್ಸಿಬಿ ವಿರುದ್ಧ ಆಡುವುದರ ಬಗ್ಗೆ ಇನ್ನು ಖಾತ್ರಿಯಾಗಿಲ್ಲ. ನಾಯಕ ದಿನೇಶ್ ಕಾರ್ತಿಕ್ ಾರ್ಮ್ಗೆ ಮರಳಿರುವುದು ಸಮಾಧಾನಕರ ಸಂಗತಿ. ಇವೊಯಿನ್ ಮಾರ್ಗನ್, ಶುಭಮಾನ್ ಗಿಲ್ ದೊಡ್ಡ ಪ್ರಮಾಣದಲ್ಲಿ ತಂಡಕ್ಕೆ ಕೊಡುಗೆ ನೀಡುತ್ತಿಲ್ಲ. ಕೆಕೆಆರ್ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ ಸಿಕ್ಕ ಮೊದಲ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿರುವುದರಿಂದ ತವರು ರಾಜ್ಯದ ತಂಡದ ವಿರುದ್ಧವೂ ಕಣಕ್ಕಿಳಿಯುವುದು ಖಚಿತವಾಗಿದೆ.
ಟೀಮ್ ನ್ಯೂಸ್:
ಆರ್ಸಿಬಿ: ಸಿಎಸ್ಕೆ ವಿರುದ್ಧ ಜಯ ದಾಖಲಿಸಿ ಆತ್ಮವಿಶ್ವಾಸದಲ್ಲಿರುವ ಆರ್ಸಿಬಿ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ.
ಕಳೆದ ಪಂದ್ಯ: ಸಿಎಸ್ಕೆ ಎದುರು 37 ರನ್ ಜಯ.
ಸಂಭಾವ್ಯ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿಕೀ), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಗುರುಕೀರತ್ ಸಿಂಗ್ ಮಾನ್, ಕ್ರಿಸ್ ಮಾರಿಸ್, ಇಸುರು ಉದಾನ, ನವದೀಪ್ ಸೈನಿ, ಯಜುವೇಂದ್ರ ಚಾಹಲ್.
ಕೆಕೆಆರ್: ಪಂಜಾಬ್ ವಿರುದ್ಧ ಫೀಲ್ಡಿಂಗ್ನಿಂದ ಹೊರಗುಳಿದಿದ್ದ ಆಂಡ್ರೆ ರಸೆಲ್ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಾಣದಿದ್ದರೆ, ತಂಡದಲ್ಲಿ ಬದಲಾವಣೆ ಅನಿವಾರ್ಯ. ತಂಡದಲ್ಲಿ ಮೀಸಲು ಆಲ್ರೌಂಡರ್ ಇಲ್ಲದೆ ಕಾರಣ ಅವರ ಸ್ಥಾನವನ್ನು ಯಾರು ತುಂಬುವರು ಎಂಬ ಬಗ್ಗೆಯೂ ಗೊಂದಲವಿದೆ.
ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು 2 ರನ್ ಜಯ.
ಸಂಭಾವ್ಯ ತಂಡ: ರಾಹುಲ್ ತ್ರಿಪಾಠಿ, ಶುಭಮಾನ್ ಗಿಲ್, ನಿತೀಶ್ ರಾಣಾ, ಇವೊಯಿನ್ ಮಾರ್ಗನ್, ದಿನೇಶ್ ಕಾರ್ತಿಕ್ (ನಾಯಕ, ವಿಕೀ), ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಸುನೀಲ್ ನಾರಾಯಣ್, ಕಮಲೇಶ್ ನಾಗರಕೋಟಿ, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಮುಖಾಮುಖಿ: 24, ಆರ್ಸಿಬಿ: 10, ಕೆಕೆಆರ್: 14.