ಸೂಪರ್ ಓವರ್‌ನಲ್ಲಿ ಪಾಕಿಸ್ತಾನ ಮಣಿಸಿದ ಜಿಂಬಾಬ್ವೆ, 5 ವರ್ಷಗಳ ಬಳಿಕ ಪಾಕ್ ವಿರುದ್ಧ ಜಯ

zimbave wib
Published on

ರಾವಲ್ಪಿಂಡಿ: ಬ್ಲೆಸಿಂಗ್ ಮುಜರಾಬನಿ ಸೂಪರ್ ಓವರ್‌ನಲ್ಲಿ ತೋರಿದ ಕೈಚಳಕದ ಲವಾಗಿ ಜಿಂಬಾಬ್ವೆ ತಂಡ ತಂಡ ಮೂರನೇ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವನ್ನು ಸೋಲಿಸಿತು. ನಿಗದಿತ 50 ಓವರ್‌ಗಳ ಅಂತ್ಯಕ್ಕೆ ಉಭಯ ತಂಡಗಳ ಟೈ ಸಾಧಿಸಿದ ಪರಿಣಾಮ ಫಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ಮುಜರಾಬನಿ ಪಾಕಿಸ್ತಾನದ 2 ವಿಕೆಟ್ ಕಬಳಿಸಿದರು. ಕೇವಲ 3 ರನ್ ಗುರಿ ಪಡೆದ ಜಿಂಬಾಬ್ವೆ ವಿಕೆಟ್ ನಷ್ಟವಿಲ್ಲದೆ ಜಯದ ನಗೆ ಬೀರಿತು. 3 ಪಂದ್ಯಗಳ ಸರಣಿಯನ್ನು ಈಗಾಗಲೇ ಜಯಿಸಿದ್ದ ಪಾಕಿಸ್ತಾನ, ಕ್ಲೀನ್ ಸ್ವೀಪ್ ಮಾಡುವ ಅವಕಾಶದಿಂದ ವಂಚಿತವಾಯಿತು. 2015ರ ಬಳಿಕ ಪಾಕಿಸ್ತಾನದ ಎದುರು ಜಿಂಬಾಬ್ವೆ ತಂಡಕ್ಕೆ ಮೊದಲ ಗೆಲುವು ಇದಾಗಿದೆ.

ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಸೀನ್ ವಿಲಿಯಮ್ಸ್ (118ರನ್, 135 ಎಸೆತ, 13 ಬೌಂಡರಿ, 1ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 278 ರನ್ ಪೇರಿಸಿತು. ಪ್ರತಿಯಾಗಿ ನಾಯಕ ಬಾಬರ್ ಅಜಮ್ (125ರನ್, 125 ಎಸೆತ, 13 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 9 ವಿಕೆಟ್‌ಗೆ 278 ರನ್ ಕಲೆಹಾಕಿತು. ಮುಜರಾಬನಿ 5 ವಿಕೆಟ್ ಕಬಳಿಸಿ ಪಾಕಿಸ್ತಾನಕ್ಕೆ ಕಡಿವಾಣ ಹಾಕಿದ್ದರು. ಅಂತಿಮ ಹಂತದವರೆಗೂ ಕುತೂಹಲ ಕೆರಳಿಸಿದ್ದ ಹೋರಾಟದಲ್ಲಿ ಪಾಕ್ ಟೈ ಸಾಧಿಸಲು ಯಶಸ್ವಿಯಾಯಿತು.

ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಶನಿವಾರದಿಂದ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net