

ನವದೆಹಲಿ: ಕೋವಿಡ್-19 ಹಾವಳಿಯಿಂದಾಗಿ ಐಪಿಎಲ್ ಅನಿರ್ದಿಷ್ಟಾ ವಧಿಗೆ ಮುಂದೂಡಲ್ಪಟ್ಟ ಬಳಿಕ ಇದೀಗ ಭಾರತ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಒಂದೊಂದಾಗಿ ರದ್ದುಗೊಳ್ಳಲಾರಂಭಿಸಿವೆ. ಜೂನ್- ಜುಲೈನಲ್ಲಿ ನಿಗದಿಯಾಗಿದ್ದ ಶ್ರೀಲಂಕಾ ಪ್ರವಾಸವನ್ನು ರದ್ದುಗೊಳಿಸಿದ ಬೆನ್ನಲ್ಲೇ ಆಗಸ್ಟ್ನಲ್ಲಿ ನಡೆಯಬೇಕಾಗಿದ್ದ ಜಿಂಬಾಬ್ವೆ ಪ್ರವಾಸವನ್ನೂ ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
ಭಾರತ ತಂಡದ ಜಿಂಬಾಬ್ವೆ ಪ್ರವಾಸದಲ್ಲಿ ಆಗಸ್ಟ್ 22ರಿಂದ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಾಗಿತ್ತು. ಹಾಲಿ ಕರೊನಾ ವೈರಸ್ ಹಾವಳಿಯಿಂದಾಗಿ ಶ್ರೀಲಂಕಾ ಮಾತ್ರವಲ್ಲ ಜಿಂಬಾಬ್ವೆಗೂ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಕರೊನಾ ಪ್ರಕರಣಗಳು ಈಗಾಗಲೆ 3 ಲಕ್ಷ ದಾಟಿದ್ದು, ಸಾವಿನ ಸಂಖ್ಯೆಯೂ 8,500ಕ್ಕಿಂತ ಹೆಚ್ಚಾಗಿದೆ. ಅತ್ತ ಜಿಂಬಾಬ್ವೆಯಲ್ಲಿ ಕರೊನಾ ಹಾವಳಿ ದೊಡ್ಡ ಪ್ರಮಾಣದಲ್ಲಿಲ್ಲ. ಜಿಂಬಾಬ್ವೆ ಯಲ್ಲಿ ಇದುವರೆಗೆ 332 ಪ್ರಕರಣ ದೃಢಪಟ್ಟಿದ್ದು, 51 ಮಂದಿ ಚೇತರಿಕೆ ಕಂಡಿದ್ದಾರೆ ಮತ್ತು 4 ಮಂದಿ ಮೃತಪಟ್ಟಿದ್ದಾರೆ. ಆದರೆ ಭಾರತದಲ್ಲಿನ ಹಾಲಿ ಪರಿಸ್ಥಿತಿಯಿಂದಾಗಿ ಸದ್ಯಕ್ಕೆ ಕ್ರಿಕೆಟ್ ತರಬೇತಿ ಆರಂಭಿಸುವುದು ಕಷ್ಟವಾಗಿದೆ. ಹಾಲಿ ಪರಿಸ್ಥಿತಿಯನ್ನು ಬಿಸಿಸಿಐ ನಿಕಟವಾಗಿ ಗಮನಿಸುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕವೇ ಕ್ರಿಕೆಟ್ ಪುನರಾರಂಭದ ಬಗ್ಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರದ ಯಾವುದೇ ಸೂಚನೆಯನ್ನು ಮೀರುವುದಿಲ್ಲ ಎಂದು ಷಾ ಹೇಳಿದ್ದಾರೆ.
ದ. ಆಫ್ರಿಕಾ ಪ್ರವಾಸವೂ ಡೌಟ್: ಜಿಂಬಾಬ್ವೆ ಪ್ರವಾಸದ ಬೆನ್ನಲ್ಲೇ ಭಾರತ ತಂಡ ಆಗಸ್ಟ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು 3 ಟಿ20 ಪಂದ್ಯಗಳ ಸರಣಿ ಆಡಬೇಕಾಗಿತ್ತು. ಆದರೆ ಈಗ ಈ ಪ್ರವಾಸವೂ ಅನುಮಾನವೆನಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಸರಣಿ ಆಡಲು ಬದ್ಧ ಎಂದು ಬಿಸಿಸಿಐ ಕಳೆದ ತಿಂಗಳು ಹೇಳಿಕೊಂಡಿದ್ದರೂ, ಹಾಲಿ ಪರಿಸ್ಥಿತಿಯಲ್ಲಿ ಪ್ರವಾಸ ಕಷ್ಟವೆನಿಸುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಈಗ 58 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳಿದ್ದು, 1,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಬೃಹತ್ ಅಭಿಯಾನ
ತರಬೇತಿ ಶಿಬಿರ ಆಯೋಜನೆಗೆ ಅವಸರವಿಲ್ಲ: ಹೊರಾಂಗಣ ತರಬೇತಿಗೆ ಸಂಪೂರ್ಣ ಸುರಕ್ಷಿತವಾದ ವಾತಾವರಣ ಸೃಷ್ಟಿಯಾದಾಗ ಮಾತ್ರ ತನ್ನ ಗುತ್ತಿಗೆ ಆಟಗಾರರ ತರಬೇತಿ ಶಿಬಿರವನ್ನು ಬಿಸಿಸಿಐ ಆಯೋಜಿಸಲಿದೆ ಎಂದು ಜಯ್ ಷಾ ತಿಳಿಸಿದ್ದಾರೆ. ‘ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಚಟುವಟಿಕೆ ಪುನರಾರಂಭಕ್ಕೆ ಬಿಸಿಸಿಐ ದೃಢಸಂಕಲ್ಪ ಹೊಂದಿದೆ. ಆದರೆ ಅವಸರ ಮಾಡುವುದಿಲ್ಲ. ನಮ್ಮ ನಿರ್ಧಾರದಿಂದಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಆರೋಗ್ಯ ಇಲಾಖೆಗಳು ಕರೊನಾ ನಿಯಂತ್ರಣಕ್ಕೆ ಮಾಡುತ್ತಿರುವ ಪ್ರಯತ್ನಗಳು ವ್ಯರ್ಥಗೊಳ್ಳದಂತೆ ಎಚ್ಚರಿಕೆ ವಹಿಸಿದ್ದೇವೆ’ ಎಂದು ಜಯ್ ಷಾ ವಿವರಿಸಿದ್ದಾರೆ.
ಮಹಿಳೆಯರ ಆತಿಥ್ಯಕ್ಕೆ ಇಂಗ್ಲೆಂಡ್ ಸಿದ್ಧತೆ: ಲಂಡನ್: ಈಗಾಗಲೆ ವೆಸ್ಟ್ ಇಂಡೀಸ್ ಪುರುಷರ ಕ್ರಿಕೆಟ್ ತಂಡಕ್ಕೆ ಆತಿಥ್ಯ ವಹಿಸಿರುವ ಇಂಗ್ಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಹಿಳೆಯರ ತಂಡದೆದುರಿನ ಸರಣಿಗೂ ಸಿದ್ಧತೆ ಆರಂಭಿಸಿದೆ. ಹಿಂದಿನ ವೇಳಾಪಟ್ಟಿಯ ಪ್ರಕಾರ ಭಾರತದ ಮಹಿಳೆಯರ ತಂಡ ಜೂನ್ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡು 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಬೇಕಾಗಿತ್ತು. ಆದರೆ ಈ ಸರಣಿ ಈಗಾಗಲೆ ಮುಂದೂಡಲ್ಪಟ್ಟಿದೆ. ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ಒಳಗೊಂಡ ತ್ರಿಕೋನ ಸರಣಿಯನ್ನು ಸೆಪ್ಟೆಂಬರ್ನಲ್ಲಿ ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಚಿಂತನೆ ನಡೆಸಿದೆ. ಆದರೆ ದೇಶದ ಕರೊನಾ ಪ್ರಕರಣಗಳ ಬಗ್ಗೆ ಗಮನ ಹರಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಇಸಿಬಿ ತಿಳಿಸಿದೆ. ಬ್ರಿಟನ್ನಲ್ಲಿ 2.85 ಲಕ್ಷಕ್ಕೂ ಅಧಿಕ ಕರೊನಾ ಪ್ರಕರಣಗಳಿದ್ದು, 40 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಟೀಮ್ ಇಂಡಿಯಾ ಆಡದೆ 100 ದಿನ!: ಮಾರ್ಚ್ ನಂತರದಲ್ಲಿ ಭಾರತ ತಂಡ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ. ವರ್ಷಾರಂಭದ ನ್ಯೂಜಿಲೆಂಡ್ ಪ್ರವಾಸದ ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 2ರಂದು ಮುಕ್ತಾಯಗೊಂಡಿತ್ತು. ಕಿವೀಸ್ನಿಂದ ವಾಪಸ್ ಆದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಬೇಕಾಗಿತ್ತು. ಆದರೆ, ಮಾ.12ರಂದು ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದರೆ, ಮತ್ತೆರಡು ಏಕದಿನ (ಮಾ. 15,18) ಕರೊನಾ ಭೀತಿಯಿಂದ ರದ್ದಾಗಿತ್ತು. ಹೀಗಾಗಿ ಟೀಮ್ ಇಂಡಿಯಾ ಮೈದಾನಕ್ಕಿಳಿದು ಆಡಿ 103 ದಿನಗಳೇ ಕಳೆದುಹೋಗಿವೆ.