VIDEO | ಚಾಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷವಾಗಿ ಸಂಭ್ರಮಿಸಿದ ಭಾವಿ ಪತ್ನಿ!

chahal web
Published on

ನವದೆಹಲಿ: ಆರ್‌ಸಿಬಿ ತಂಡ ಐಪಿಎಲ್ 13ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವ ಪಡೆದರು. ಅವರ ಈ ಪ್ರಶಸ್ತಿಯನ್ನು ಅವರ ಭಾವಿ ಪತ್ನಿ ಹಾಗೂ ಕೋರಿಯೋಗ್ರಾರ್ ಧನಶ್ರೀ ವರ್ಮ ವಿಶೇಷವಾಗಿ ಸಂಭ್ರಮಿಸಿದ್ದಾರೆ.

164 ರನ್ ಸವಾಲು ಬೆನ್ನಟ್ಟುತ್ತಿದ್ದ ಸನ್‌ರೈಸರ್ಸ್‌ ತಂಡ 1 ವಿಕೆಟ್‌ಗೆ 89 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಸಮಯದಲ್ಲಿ ಚಾಹಲ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ್ದರು. ಮನೀಷ್ ಪಾಂಡೆ, ಬೇರ್ ಸ್ಟೋ ಮತ್ತು ವಿಜಯ್ ಶಂಕರ್ ಅವರ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಚಾಹಲ್ ಆರ್‌ಸಿಬಿ ಗೆಲುವನ್ನು ಸುಲಭಗೊಳಿಸಿದ್ದರು.

4 ಓವರ್‌ಗಳಲ್ಲಿ 18 ರನ್‌ಗೆ 3 ವಿಕೆಟ್ ಕಬಳಿಸಿದ ಚಾಹಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುತ್ತಿರುವ ಸಮಯದಲ್ಲಿ ಭಾವಿ ಪತ್ನಿ ಧನಶ್ರೀ ವರ್ಮ ಮನೆಯ ಟಿವಿ ಎದುರು ನಿಂತು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಮುನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅವರು, ‘ನನ್ನ ಪಂದ್ಯಶ್ರೇಷ್ಠ’ ಎಂದು ಚಾಹಲ್ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಚಾಹಲ್ ಅವರನ್ನು ಚಿಯರ್ ಮಾಡುತ್ತಿರುವ ವಿಡಿಯೋದೊಂದಿಗೆ ಧನಶ್ರೀ ವರ್ಮ, ‘ಇದು ನಮ್ಮಿಬ್ಬರಿಗೆ ಜತೆಯಾಗಿ ಮೊದಲ ಪಂದ್ಯ. ನನಗಿದು ಹಲವು ಕಾರಣಗಳಿಂದಾಗಿ ವಿಶೇಷವಾದ ಕ್ಷಣವಾಗಿದೆ. ನಿಮಗೆ ನನ್ನ ಎಲ್ಲ ಬೆಂಬಲ ಮತ್ತು ಪ್ರೀತಿ ಯಾವಾಗಲೂ ಇರುತ್ತದೆ. ಚಾಹಲ್ ಮತ್ತು ಸಂಪೂರ್ಣ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು’ ಎಂದು ಬರೆದುಕೊಂಡಿದ್ದಾರೆ. ದಂತವೈದ್ಯೆಯೂ ಆಗಿರುವ ಧನಶ್ರೀ ವರ್ಮ ಅವರೊಂದಿಗೆ ಚಾಹಲ್ ಐಪಿಎಲ್ ಟೂರ್ನಿಗಾಗಿ ಯುಎಇಗೆ ಪ್ರಯಾಣಿಸುವುದಕ್ಕೆ ಮುನ್ನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ವರ್ಷಾರಂಭದಲ್ಲಿ ಚಾಹಲ್-ಧನಶ್ರೀ ವೈವಾಹಿಕ ಜೀವನಕ್ಕೆ ಕಾಲಿಡುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net