

ನವದೆಹಲಿ: ಭಾರತ ತಂಡದ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗ ಐಪಿಎಲ್ 13ನೇ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಪರ ಆಡುತ್ತಿರಬೇಕಾಗಿತ್ತು. ಆದರೆ ಕರೊನಾ ಸೋಂಕಿನ ಹಾವಳಿಯಿಂದಾಗಿ ಐಪಿಎಲ್ ಟೂರ್ನಿಯೇ ನಡೆಯದಿರುವುದ ರಿಂದ ತಮ್ಮ ಮೊದಲ ಆಯ್ಕೆಯ ಕ್ರೀಡೆಗೆ ಮತ್ತೆ ಮರಳಿದ್ದಾರೆ ಅಂದರೆ ಮತ್ತೊಮ್ಮೆ ಚೆಸ್ ಆಟಗಾರರಾಗಿ ಬದಲಾಗಿದ್ದಾರೆ!
ಆನ್ಲೈನ್ ಮೂಲಕ ಆಯೋಜಿಸಲಾಗಿರುವ 70 ಸಾವಿರ ರೂ. ಬಹುಮಾನ ಮೊತ್ತದ ದೇಸಿ ಬಾಯ್್ಸ ಬ್ಲಿಟ್ಜ್ ಚೆಸ್ ಟೂರ್ನಿಯಲ್ಲಿ ಚಾಹಲ್ ಕಣಕ್ಕಿಳಿದಿದ್ದಾರೆ. ಭಾನುವಾರ ಈ ಟೂರ್ನಿ ಆರಂಭವಾಗಿದ್ದು, ಸದ್ಯ ಚಿನ್ನಸ್ವಾಮಿ ಮೈದಾನಕ್ಕಿಳಿದು ಸ್ಪಿನ್ ಬೌಲಿಂಗ್ ಕೌಶಲವನ್ನು ತೋರುವ ಅವಕಾಶ ಇಲ್ಲದ ಕಾರಣ 29 ವರ್ಷದ ಚಾಹಲ್, 64 ಚೌಕದೊಳಗೆ ತಮ್ಮ ಹಳೆಯ ಪ್ರತಿಭೆಯನ್ನು ಮತ್ತೆ ಪ್ರದರ್ಶಿಸಲಾರಂಭಿಸಿದ್ದಾರೆ. ಚೆಸ್ ಡಾಟ್ ಕಾಮ್ ಮೂಲಕ ಈ ಟೂರ್ನಿಯ ಪಂದ್ಯಗಳು ನಡೆಯುತ್ತಿವೆ. ಬಾಲ್ಯದಲ್ಲಿ ಚದುರಂಗದಾಟದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಹರಿಯಾಣದ ಚಾಹಲ್, 12 ವಯೋಮಿತಿಯ ಚೆಸ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ವಿಶ್ವ ಯೂತ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಭಾರತ ತಂಡವನ್ನೂ ಪ್ರತಿನಿಧಿಸಿದ್ದರು. ವಿಶ್ವ ಚೆಸ್ ಆಡಳಿತ ಸಂಸ್ಥೆ ಫಿಡೆ ನೀಡುವ ರೇಟಿಂಗ್ನಲ್ಲಿ 1956 ಅಂಕಗಳನ್ನೂ ಪಡೆದಿದ್ದಾರೆ. ಆದರೆ ಬಳಿಕ ಚೆಸ್ ಆಟಗಾರರಾಗಿ ಮುಂದುವರಿಯಲು ಪ್ರಾಯೋಜಕರ ಕೊರತೆ ಎದುರಾದ ಕಾರಣ ಕ್ರಿಕೆಟ್ನತ್ತ ಗಮನ ಹರಿಸಿದ್ದರು.
ದೇಶೀಯ ಕ್ರಿಕೆಟ್ನಲ್ಲಿ ಹರಿಯಾಣ ಪರ ಮಿಂಚಿದ ಬಳಿಕ 2014ರ ಐಪಿಎಲ್ನಲ್ಲಿ ಆರ್ಸಿಬಿ ತಂಡ ಸೇರಿದ್ದರು. 2015-16ರ ಐಪಿಎಲ್ನಲ್ಲಿ ತೋರಿದ ಉತ್ತಮ ನಿರ್ವಹಣೆಯ ಬಳಿಕ 2016ರಲ್ಲಿ ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಅನಂತರ ಚಾಹಲ್ ತಿರುಗಿ ನೋಡಿದ್ದಿಲ್ಲ. ಭಾರತ ಪರ ಇದುವರೆಗೆ 40 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 71 ಮತ್ತು 52 ವಿಕೆಟ್ ಕಬಳಿಸಿದ್ದಾರೆ.