

ನವದೆಹಲಿ: ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಈ ಬಾರಿ ನಡೆದ ಟಿ20 ವಿಶ್ವಕಪ್ನ ರಾಯಭಾರಿಯಾಗಿ ನೇಮಕಗೊಂಡಿದ್ದರು. ಈ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮುಂದೆ ಹಾಜರಾಗಿದ್ದ ಯುವಿ, ತದನಂತರ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದೀಗ ಫ್ಯಾನ್ಸ್ಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದ್ದು, ಮಹೇಂದ್ರ ಸಿಂಗ್ ಧೋನಿ ಅವರ 'ಎಂ.ಎಸ್. ಧೋನಿ' ಬಯೋಪಿಕ್ ಚಿತ್ರದಂತೆಯೇ ಇದೀಗ ಯುವರಾಜ್ ಜೀವನಾಧಾರಿತವು ಚಿತ್ರವಾಗಿ ಮೂಡಿಬರಲು ಸಜ್ಜಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಜಾಲತಾಣಗಳಲ್ಲಿ ಭಾರೀ ಸಂತಸವನ್ನು ವ್ಯಕ್ತಪಡಿಸಿದೆ.
ಇದನ್ನೂ ಓದಿ: ಗಣೇಶ ಮಹಾ ಮಂಡಳ ಸಭೆ 22ಕ್ಕೆ
ಈ ಹಿಂದೆ ಕ್ರಿಕೆಟಿಗ, ಟೀಮ್ ಇಂಡಿಯಾದ ಶ್ರೇಷ್ಠ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ ಅನ್ನು ಹಿಂದಿ ಭಾಷೆಯಲ್ಲಿ 'ಎಂ.ಎಸ್. ಧೋನಿ-ದಿ ಅನ್ಟೋಲ್ಡ್ ಸ್ಟೋರಿ' ಎಂಬ ಶೀರ್ಷಿಕೆಯಡಿ ರಿಲೀಸ್ ಮಾಡಲಾಗಿತ್ತು. ಈ ಚಿತ್ರ ನೋಡಿದ ಬಳಿಕ ಬಾಲ್ಯದಿಂದ ಕ್ರಿಕೆಟ್ ವೃತ್ತಿಯವರೆಗೂ ಧೋನಿ ನಡೆದುಬಂದ ಹಾದಿ ಮತ್ತಷ್ಟು ಸ್ಪಷ್ಟವಾಗಿ ತಿಳಿಯಿತು. ಈ ಸಿನಿಮಾ ಅನೇಕರಿಗೆ ಸ್ಪೂರ್ತಿ ಕೂಡ ತುಂಬಿತು. ಸದ್ಯ ಇದೇ ರೀತಿ ಈಗ ಯುವರಾಜ್ ಸಿಂಗ್ ಅವರ ಜೀವನಾಧಾರಿತ ಚಿತ್ರ ತಯಾರಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಸಿಕ್ಸರ್ಗಳ ಸರದಾರ, 2011ರ ವಿಶ್ವಕಪ್ ಹೀರೋ ಯುವಿ ಪಾತ್ರದಲ್ಲಿ ಯಾವ ಚಿತ್ರರಂಗದ ಸ್ಟಾರ್ ನಟ ನಟಿಸಬಹುದು ಎಂಬ ಪ್ರಶ್ನೆಗಳು ಇದೀಗ ಭಾರೀ ಚರ್ಚೆಯಾಗುತ್ತಿದ್ದು, ಒಟ್ಟಾರೆ ಯುವರಾಜ್ ಸಿಂಗ್ ಅವರ ಬಾಲ್ಯ, ಕಷ್ಟದ ದಿನಗಳು, ಗೆಲುವಿನ ಹಾದಿ ಹೇಗಿತ್ತು ಎಂಬುದನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯತೊಡಗಿದ್ದಾರೆ. ಬಯೋಪಿಕ್ ಚಿತ್ರದ ಕುರಿತು ಇನ್ನಷ್ಟು ಮಾಹಿತಿಗಾಗಿ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).