

ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಘೋಷಣೆಯಾಗಿದ್ದ ಲಾಕ್‌ಡೌನ್ ವೇಳೆ ಬಹುತೇಕ ಕ್ರಿಕೆಟಿಗರಿಗೆ ಸಾಮಾಜಿಕ ಜಾಲತಾಣವೇ ಪ್ರಮುಖ ಅಸ್ತ್ರವಾಗಿತ್ತು. ಸಂಪೂರ್ಣ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಲಾಕ್ ಆಗಿದ್ದ ಕ್ರಿಕೆಟಿಗರು, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಇದೇ ವೇಳೆ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಪಾತ್ರೆ ತೊಳೆಯುತ್ತಿರುವುದನ್ನು ತಾಯಿ ಚಿತ್ರೀಕರಿಸಿದ್ದಾರೆ. ತಾಯಿ ಮಾಡಿರುವ ವಿಡಿಯೋವನ್ನು ಯುವರಾಜ್ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಸದ್ಯ ಪಾತ್ರೆ ತೊಳೆಯುತ್ತಿರುವುದನ್ನು ವಿಡಿಯೋ ಮಾಡಿದ್ದೀರಿ, ಮನೆ ಕಸ ಗುಡಿಸುತ್ತಿರುವುದನ್ನು ವಿಡಿಯೋ ಮಾಡಿಲ್ಲವಲ್ಲ’ ಎಂದು ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬಳಿಕ ಕಳೆದ ವರ್ಷ ಅಬುಧಾಬಿಯಲ್ಲಿ ಟಿ 10 ಲೀಗ್‌ನಲ್ಲಿ ಆಡಿದ್ದ ಯುವರಾಜ್ ಸಿಂಗ್, ಬಳಿಕ ಕುಟುಂಬ ಸದಸ್ಯರ ಜತೆಗಿದ್ದರು. ಲಾಕ್‌ಡೌನ್ ವೇಳೆ ಕುಟುಂಬ ಸದಸ್ಯರ ಜತೆಗೂಡಿ ಅಡುಗೆ ಮಾಡುವುದು, ಫಿಟ್ನೆಸ್‌ಗಾಗಿ ದೈಹಿಕ ಕಸರತ್ತು ಮಾಡುತ್ತಾ ಯುವಿ ಟೈಂ ಪಾಸ್ ಮಾಡುತ್ತಿದ್ದರು. ಯುವಿ ಪಾತ್ರೆ ತೊಳೆಯುತ್ತಿರುವುದನ್ನು ತಾಯಿ ಮಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಬೆನ್ನಲ್ಲೇ ಸಾವಿರಾರು ಮಂದಿ ಲೈಕ್ ಮಾಡಿ, ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರಫೇಲ್ ಆಗಮನಕ್ಕೆ ಕ್ರೀಡಾತಾರೆಯರಿಂದ ಸ್ವಾಗತ, ಸಂಭ್ರಮ
2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿ ವೇಳೆ ಯುವರಾಜ್ ಸಿಂಗ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. 17 ವರ್ಷಗಳ ಕಾಲ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ಯುವರಾಜ್ ಸಿಂಗ್, 40 ಟೆಸ್ಟ್, 304 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿದ್ದರು. ಭಾರತದ ಸರ್ವಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಯುವರಾಜ್ ಸಿಂಗ್, 2007ರ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಿವೃತ್ತಿ ಬಳಿಕ ಕೆನಡ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಆಡಲು ಯುವರಾಜ್ ಸಿಂಗ್, ಬಿಸಿಸಿಐನಿಂದ ಎನ್‌ಓಸಿ ಪಡೆದಿದ್ದರು.