ಯುವಿ ಬಯೋಪಿಕ್​ಗೆ ಕೇಳಿಬಂತು ಮೂವರ ಹೆಸರು! ಯುವರಾಜ್​ ಸಿಂಗ್ ಪಾತ್ರಕ್ಕೆ ಯಾವ ನಟ ಸೂಕ್ತ? | Yuvraj Singh Biopic

ವಿಜಯವಾಣಿ (2)
Published on

Yuvraj Singh Biopic: ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್, 2011ರ ವಿಶ್ವಕಪ್ ಹೀರೋ, ಸಿಕ್ಸರ್​ಗಳ ಸರದಾರ ಎಂದೇ ಪ್ರಖ್ಯಾತಿ ಪಡೆದಿರುವ ಯುವರಾಜ್ ಸಿಂಗ್, ಇಂದಿಗೂ ಅದೆಷ್ಟೋ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ ಎಂದರೆ ತಪ್ಪಾಗಲಾರದು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2011ರ ವಿಶ್ವಕಪ್​ ತಂಡದಲ್ಲಿದ್ದ ಯುವರಾಜ್​, ಟೂರ್ನಿ ಪೂರ ಭಾರತದ ಪರ ಅದ್ಭುತ ಇನ್ನಿಂಗ್ಸ್​ ಕೊಡುಗೆ ಕೊಟ್ಟಿದ್ದರು. ಯುವಿ ಸ್ಫೋಟಕ ಬ್ಯಾಟಿಂಗ್​, ಸ್ಪಿನ್​ ದಾಳಿ ಮತ್ತು ಫೀಲ್ಡಿಂಗ್​​ ಇವೆಲ್ಲವೂ ಅಂದು ಕ್ರಿಕೆಟ್​ ಪ್ರಿಯರ ಹುಚ್ಚು ಹಿಡಿಸಿತ್ತು. ಸದ್ಯ ಕ್ರಿಕೆಟ್​ ವೃತ್ತಿಗೆ ನಿವೃತ್ತಿ ಘೋಷಿಸಿರುವ ಯುವರಾಜ್​ ಇದೀಗ ಬಯೋಪಿಕ್​ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ.

ಈ ಹಿಂದೆ ಕ್ರಿಕೆಟಿಗ, ಟೀಮ್ ಇಂಡಿಯಾದ ಶ್ರೇಷ್ಠ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್​ ಅನ್ನು ಹಿಂದಿ ಭಾಷೆಯಲ್ಲಿ ‘ಎಂ.ಎಸ್​. ಧೋನಿ-ದಿ ಅನ್​ಟೋಲ್ಡ್​ ಸ್ಟೋರಿ’ ಎಂಬ ಶೀರ್ಷಿಕೆಯಡಿ ರಿಲೀಸ್ ಮಾಡಲಾಗಿತ್ತು. ಈ ಚಿತ್ರ ನೋಡಿದ ಬಳಿಕ ಬಾಲ್ಯದಿಂದ ಕ್ರಿಕೆಟ್ ವೃತ್ತಿಯವರೆಗೂ ಧೋನಿ ನಡೆದುಬಂದ ಹಾದಿ ಮತ್ತಷ್ಟು ಸ್ಪಷ್ಟವಾಗಿ ಎಲ್ಲರಿಗೂ ತಿಳಿಯಿತು. ಈ ಸಿನಿಮಾ ಅನೇಕರಿಗೆ ಸ್ಪೂರ್ತಿ ಕೂಡ ತುಂಬಿತು. ಸದ್ಯ ಇದೇ ರೀತಿ ಈಗ ಯುವರಾಜ್ ಸಿಂಗ್​ ಅವರ ಜೀವನಾಧಾರಿತ ಚಿತ್ರ ತಯಾರಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪೂರ್ವ ತಯಾರಿ ಬೆನ್ನಲ್ಲೇ ಯುವಿ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆಗಳು ಇದೀಗ ಜಾಲತಾಣಗಳನ್ನು ಸುತ್ತುವರೆದಿದ್ದು, ಅವರ ಪಾತ್ರಕ್ಕೆ ಇವರೇ ಅರ್ಹರು ಎಂದು ಕೆಲವರು ಅಭಿಪ್ರಾಯಿಸುತ್ತಿದ್ದಾರೆ.

ದಾಖಲೆಗಳ ಹೀರೋ ಯುವಿ ಪಾತ್ರದಲ್ಲಿ ಯಾವ ಚಿತ್ರರಂಗದ ಸ್ಟಾರ್​ ನಟಿಸಬಹುದು ಎಂಬ ಪ್ರಶ್ನೆಗಳ ಸುರಿಮಳೆಯೇ ಹರಿದುಬಂದಿದ್ದು, ಬಾಲಿವುಡ್​ನ ಮೂವರು ಸ್ಟಾರ್​ ನಟರ ಹೆಸರು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಧೋನಿ ಅವರ ಬಯೋಪಿಕ್​ನಲ್ಲಿ ದಿವಗಂತ ನಟ ಸುಶಾಂತ್ ಸಿಂಗ್ ರಜ್​ಪುತ್​ ನಟಿಸಿ, ‘ಕ್ಯಾಪ್ಟನ್​ ಕೂಲ್’​ರಂತೆ ತೆರೆಮೇಲೆ ಕಾಣಿಸಿಕೊಂಡಿದ್ದರು. ಬೆಳ್ಳಿ ಪರದೆಯ ಮೇಲೆ ಮಾಹಿಯಂತೆಯೇ ನಟಿಸಿದ ಸುಶಾಂತ್​ ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಯುವರಾಜ್ ಪಾತ್ರಕ್ಕೂ ಅದೇ ರೀತಿಯ ತಯಾರಿಗಳು ಭರದಿಂದ ಸಾಗಿವೆ.

ಯುವರಾಜ್ ಸಿಂಗ್ ಬಯೋಪಿಕ್ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಭಾರೀ ಕುತೂಹಲ ವ್ಯಕ್ತಪಡಿಸಿರುವ ಅಭಿಮಾನಿಗಳ ಪೈಕಿ ಕೆಲವರು ಯುವರಾಜ್​ರಂತೆ ಕಾಣಿಸುವ ನಟನನ್ನು ಆಯ್ಕೆ ಮಾಡಿ ಎಂದರೆ, ಇನ್ನೂ ಕೆಲವರು ಯುವಿ ಎಡಗೈ ಬ್ಯಾಟಿಂಗ್​ ಹಾಗೂ ಬೌಲಿಂಗ್ ಶೈಲಿ ಪರೀಕ್ಷಿಸಿ ತೆಗೆದುಕೊಳ್ಳಿ. ನೀವು ಆಯ್ಕೆ ಮಾಡುವ ಹೀರೋಗೆ ಈ ಎಲ್ಲಾ ಕ್ವಾಲಿಟಿಗಳು ಇರಲಿ ಎಂದು ಪ್ರತ್ಯೇಕವಾಗಿ ಒತ್ತಿ ಹೇಳಿದ್ದಾರೆ. ಸದ್ಯ ಯುವಿ ಪಾತ್ರಕ್ಕೆ ಬಾಲಿವುಡ್​ನ ಮೂವರು ನಟರ ಹೆಸರು ಈ ಕೆಳಕಂಡಂತಿವೆ.

ನಟ ರಣಬೀರ್​ ಕಪೂರ್​, ಸಿದ್ಧಾಂತ್ ಚತುರ್ವೇದಿ ಮತ್ತು ಆಯುಷ್ಮಾನ್ ಖುರಾನ ಈ ಮೂವರ ಹೆಸರು ಸದ್ಯ ಮುಂಚೂಣಿಯಲ್ಲಿದ್ದು, ಇವರ ಪೈಕಿ ಯಾರನ್ನು ಯುವಿ ಪಾತ್ರದಲ್ಲಿ ತೋರಿಸಬೇಕು ಎಂಬುದೇ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ಅಸಲಿಗೆ ಚತುರ್ವೇದಿ ಅವರ ಮುಖ ಯುವರಾಜ್​ರನ್ನು ಹೋಲುತ್ತದೆ ಎಂಬ ಕಾರಣಕ್ಕೆ ಅವರನ್ನೇ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ಪ್ರಸ್ತುತ ಚಿತ್ರದ ಕೆಲಸಗಳು ಇನ್ನೂ ಬಾಕಿ ಉಳಿದಿದ್ದು, ಮಂದಗತಿಯಲ್ಲಿ ಸಾಗುತ್ತಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಈ ಕುರಿತು ಚಿತ್ರತಂಡದ ನಿಲುವೇನು? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net