

ಚೆಂಗ್ಡು (ಚೀನಾ): ಇಶಾರಾಣಿ ಬರುವಾ ಮತ್ತು ಅನ್ಮೋಲ್ ರ್ಖಬ್ ಭರ್ಜರಿ ನಿರ್ವಹಣೆಯ ಬಲದಿಂದ ಭಾರತದ ಯುವ ತಂಡ ಉಬೆರ್ ಕಪ್ ಮಹಿಳಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಕ್ವಾರ್ಟರ್ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ 4-1ರಿಂದ ಸಿಂಗಾಪುರ ವಿರುದ್ಧ ಗೆಲುವು ದಾಖಲಿಸಿತು.
ಆರಂಭಿಕ ಪಂದ್ಯದಲ್ಲಿ ಅಶ್ಮಿತಾ ಚಾಲಿಹ 15-21, 18-21ರಿಂದ ಯಿಯೊ ಜಿಯಾ ಮಿನ್ ಎದುರು ಪರಾಭವಗೊಂಡರು. ಬಳಿಕ ಭಾರತ ಉಳಿದ ಎರಡೂ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಗಳಲ್ಲಿ ಗೆದ್ದು ಬೀಗಿತು. ಭಾರತ ಆರಂಭಿಕ ಪಂದ್ಯದಲ್ಲಿ ಕೆನಡ ವಿರುದ್ಧವೂ 4-1ರಿಂದ ಗೆದ್ದಿತ್ತು.
ಡಬಲ್ಸ್ನಲ್ಲಿ ಪ್ರಿಯಾ ಕೆ-ಶ್ರುತಿ ಮಿಶ್ರಾ ಮತ್ತು ಸಿಮ್ರಾನ್ ಸಿಂಘಿ-ರಿತಿಕಾ ಥಾಕರ್ ಜೋಡಿ ಗೆಲುವು ಸಾಧಿಸಿತು. 2ನೇ ಸಿಂಗಲ್ಸ್ ಪಂದ್ಯದಲ್ಲಿ ಇಶಾರಾಣಿ 21-13, 21-16ರಿಂದ ಇನ್ಸ್ಯಿರಾ ಖಾನ್ ಎದುರು ಗೆಲುವು ಸಾಧಿಸಿದರೆ, ಅನ್ಮೋಲ್ 21-15, 21-13ರಿಂದ ಲೀ ಕ್ಸಿನ್ ಯಿ ಮೆಗನ್ ಎದುರು ಜಯಿಸಿದರು. ಭಾರತ ಈಗ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದು, ಮಂಗಳವಾರ ನಡೆಯಲಿರುವ ಕೊನೇ ಲೀಗ್ ಪಂದ್ಯದಲ್ಲಿ ಅಗ್ರಸ್ಥಾನಿ ಚೀನಾ ತಂಡವನ್ನು ಎದುರಿಸಲಿದೆ. ಭಾರತ ಮಹಿಳಾ ತಂಡ 1957, 2014 ಮತ್ತು 2016ರಲ್ಲಿ ಸೆಮಿಫೈನಲ್ಗೇರಿ ಪದಕ ಗೆದ್ದಿತ್ತು. ಈ ಬಾರಿ ಪಿವಿ ಸಿಂಧು ಜತೆಗೆ ಅನುಭವಿ ಡಬಲ್ಸ್ ಆಟಗಾರ್ತಿಯರ ಗೈರಿನ ನಡುವೆಯೂ ಭಾರತ ನಾಕೌಟ್ ಹಂತಕ್ಕೇರಿರುವುದು ವಿಶೇಷವಾಗಿದೆ.