

ಲಂಡನ್: ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ನಂತರ ಭಾರತೀಯ ಕ್ರಿಕೆಟ್ಗೆ ಯಾರು ದಿಕ್ಕು ಎಂಬ ಪ್ರಶ್ನೆ ಎದ್ದಾಗಲೇ ಆಸರೆಯಾದವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮ. ಇದೀಗ ಇವರಿಬ್ಬರು ಟೆಸ್ಟ್ ಮಾದರಿಗೆ ನಿವೃತ್ತಿ ಹೇಳಿ ಹೊರನಡೆದಿರುವ ಸಮಯದಲ್ಲಿ ಭಾರತೀಯ ಬ್ಯಾಟಿಂಗ್ ವಿಭಾಗಕ್ಕೆ ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಆಧಾರವಾಗಿದ್ದು, ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದ್ದಾರೆ. ಎಜ್ಬಾಸ್ಟನ್ ಟೆಸ್ಟ್ನಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಸಾವಿರಕ್ಕೂ ಅಧಿಕ ರನ್ ಸಿಡಿಸಿದ ಭಾರತ ತಂಡ ಇದೀಗ ಸುರತ ಕೈಗಳಲ್ಲಿರುವುದು ಖಾತ್ರಿಗೊಂಡಿದೆ.
ಕೊಹ್ಲಿ, ರೋಹಿತ್, ಅಶ್ವಿನ್ ನಿವೃತ್ತಿಯ ನಂತರ ಭಾರತ ಟೆಸ್ಟ್ ತಂಡದಲ್ಲಿ ಸ್ಥಿತ್ಯಂತರ ಶುರುವಾಗಿತ್ತು. ಹೀಗಾಗಿ ಭಾರತ ಯುವ ತಂಡದೊಂದಿಗೆ ಇಂಗ್ಲೆಂಡ್ ನೆಲಕ್ಕೆ ಕಾಲಿಟ್ಟಾಗ ಮತ್ತು ನಾಯಕತ್ವದಲ್ಲಿ ಅತ್ಯಂತ ಅನನುಭವಿಯಾಗಿದ್ದ ಶುಭಮಾನ್ ಗಿಲ್ಗೆ ಜವಾಬ್ದಾರಿ ಹೆಗಲೇರಿದಾಗ ಅಭಿಮಾನಿಗಳಲ್ಲಿ ಮತ್ತು ಕ್ರಿಕೆಟ್ ಪಂಡಿತರಲ್ಲಿ ಅಲ್ಪ ಅಳುಕು ಹುಟ್ಟಿತ್ತು. ಆದರೆ ಇದೀಗ ಆಂಗ್ಲರ ನೆಲದಲ್ಲಿ ಆಡಿದ ಮೊದಲ 2 ಟೆಸ್ಟ್ಗಳಲ್ಲೇ ಎಲ್ಲದಕ್ಕೂ ಉತ್ತರ ಲಭಿಸಿದೆ. ಲೀಡ್ಸ್ನಲ್ಲಿ ಭಾರತ ಮೊದಲ 4 ದಿನ ಪ್ರಾಬಲ್ಯ ಸಾಧಿಸಿದರೂ ಕೊನೇ ದಿನ ಸೋಲು ಕಂಡಿತ್ತು. ಅಲ್ಲಿ ಮಾಡಿದ್ದ ಕೆಲ ತಪು$್ಪಗಳನ್ನು ಎಜ್ಬಾಸ್ಟನ್ನಲ್ಲಿ ತಿದ್ದಿಕೊಂಡ ಭಾರತ, ಪಂದ್ಯದ ಐದೂ ದಿನ ಪ್ರಾಬಲ್ಯ ಸಾಧಿಸಿ ಆಂಗ್ಲರನ್ನು ಸದೆಬಡಿದಿದೆ. ಜತೆಗೆ ಆಕ್ರಮಣಕಾರಿ ಬಾಜ್ಬಾಲ್ ಕಾರ್ಯತಂತ್ರದ ಬಗ್ಗೆಯೇ ಬೆನ್ ಸ್ಟೋಕ್ಸ್ ಪಡೆ ಮರುಚಿಂತನೆ ನಡೆಸುವಂತೆ ಮಾಡಿದೆ.
ಇನ್ನು ಸರಣಿಯ ಆರಂಭದಲ್ಲಿ ಭಾರತೀಯ ಬೌಲಿಂಗ್ ವಿಭಾಗ, ಜಸ್ಪ್ರೀತ್ ಬುಮ್ರಾ ಅವರನ್ನು ಅತಿಯಾಗಿ ಅವಲಂಭಿಸಿದೆ ಎಂದು ದೂರಲಾಗಿತ್ತು. ಅಲ್ಲದೆ ಎಜ್ಬಾಸ್ಟನ್ ಟೆಸ್ಟ್ನಿಂದ ಬುಮ್ರಾಗೆ ವಿಶ್ರಾಂತಿ ನೀಡಿದಾಗ ಟೀಕೆಗಳೂ ಬಂದಿದ್ದವು. ಆದರೆ ಇದೀಗ ಬುಮ್ರಾ ಗೈರಿನಲ್ಲೂ ಆಂಗ್ಲರ ಎಲ್ಲ 20 ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತೀಯ ಬೌಲರ್ಗಳು ದಿಟ್ಟ ಉತ್ತರ ನೀಡಿದ್ದಾರೆ. ಆಕಾಶ್ದೀಪ್-ಸಿರಾಜ್ ಜೋಡಿಯನ್ನು ಲಾರ್ಡ್ಸ್ನಲ್ಲಿ ಬುಮ್ರಾ ಕೂಡಿಕೊಂಡಾಗ ಆಂಗ್ಲರಿಗೆ ಇನ್ನಷ್ಟು ಕಠಿಣ ಸವಾಲು ಎದುರಾಗುವುದು ಖಂಡಿತ.