ಏನ್​ ಗುರು ನೀನು... ಮೊಹಮ್ಮದ್ ಸಿರಾಜ್ ವಿರುದ್ಧ ರವೀಂದ್ರ ಜಡೇಜಾ ಆಕ್ರೋಶ, ವಿಡಿಯೋ ವೈರಲ್! Mohammed Siraj ​

Mohammed Siraj
Published on

Mohammed Siraj : ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಕಹಿ ಅನುಭವಗಳನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ 3ನೇ ಟೆಸ್ಟ್‌ ಪಂದ್ಯದ ವೇಳೆ ಆಸ್ಟ್ರೇಲಿಯಾದ ಅಭಿಮಾನಿಗಳು ಸಿರಾಜ್​ರನ್ನು ಕಟುವಾದ ಭಾಷೆಯಲ್ಲಿ ನಿಂದಿಸಿದ್ದಾರೆ. ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದ ಸಮಯದಲ್ಲಿ ಟ್ರಾವಿಸ್ ಹೆಡ್​ ಜತೆ ಸಿರಾಜ್ ಕಿತ್ತಾಡಿಕೊಂಡಿದ್ದರು. ಹೀಗಾಗಿ ಆಸಿಸ್​ ಅಭಿಮಾನಿಗಳ ಕೆಂಗಣ್ಣಿಗೆ ಸಿರಾಜ್​ ಗುರಿಯಾಗಿದ್ದಾರೆ.

ಶನಿವಾರ (ಡಿ.14) ಬ್ರಿಸ್ಬೇನ್​ನ ಗಬ್ಬಾ ಕ್ರೀಡಾಂಗಣದಲ್ಲಿ ಆರಂಭವಾದ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ 3ನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಆಸೀಸ್ ಅಭಿಮಾನಿಗಳು ಸಿರಾಜ್ ಅವರನ್ನು ಅವಮಾನಿಸುವ ರೀತಿಯಲ್ಲಿ ವರ್ತಿಸಿದರು. ಪಂದ್ಯದ 2ನೇ ದಿನವಾದ ಭಾನುವಾರ (ಡಿ.15) ಮತ್ತೊಂದು ಕಹಿ ಅನುಭವ ಎದುರಿಸಿದರು. ತಂಡದ ಸಹ ಆಟಗಾರ ರವೀಂದ್ರ ಜಡೇಜಾ, ಸಿರಾಜ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಂದಹಾಗೆ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲು ಟೀಮ್​ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ಭಾಗವಾಗಿ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಅನುಕ್ರಮದಲ್ಲಿ, ಟೀಮ್​ ಇಂಡಿಯಾ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯವನ್ನು ಗೆದ್ದರೆ, ಆಸ್ಟ್ರೇಲಿಯಾ ಅಡಿಲೇಡ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು ಗೆದ್ದು, 1-1 ರಲ್ಲಿ ಸರಣಿಯಲ್ಲಿ ಸಮಬಲ ಸಾಧಿಸಿತು.

ಇದೀಗ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವೆ 3ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಶನಿವಾರದ ಮೊದಲ ದಿನದ ಆಟ ಮಳೆಯಿಂದಾಗಿ ರದ್ದಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯರು 13.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದರು. ಭಾನುವಾರ ಎರಡನೇ ದಿನದ ಆಟ ಸುಗಮವಾಗಿ ಸಾಗಿತು. ಟ್ರಾವಿಸ್ ಹೆಡ್ ಅವರ ಬೃಹತ್ ಶತಕ (152) ಮತ್ತು ಸ್ಟೀವ್ ಸ್ಮಿತ್ (101) ಅವರ ಶತಕ ಆಸೀಸ್ ತಂಡವನ್ನು ಬಲಿಷ್ಠ ಸ್ಥಿತಿಗೆ ತಂದಿತು. 10 ವಿಕೆಟ್ ನಷ್ಟಕ್ಕೆ 445 ರನ್​ಗಳ ಬೃಹತ್ ಸ್ಕೋರ್ ಗಳಿಸಿತು. ಭಾರತದ ಬೌಲರ್‌ಗಳಲ್ಲಿ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆದರೆ, ಸಿರಾಜ್ ಎರಡು ವಿಕೆಟ್​ ಪಡೆದರು. ನಿತೀಶ್ ಕುಮಾರ್ ರೆಡ್ಡಿ ಹಾಗೂ ಆಕಾಶ್​ ದೀಪ್​ ತಲಾ ಒಂದು ವಿಕೆಟ್ ಗಳಿಸಿದರು.

ನಿನ್ನೆ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಕಣಕ್ಕೆ ಇಳಿದರು. ಹದಿನಾರು ಓವರ್ ಬೌಲಿಂಗ್ ಮಾಡಿ 76 ರನ್ ಬಿಟ್ಟುಕೊಟ್ಟರು. ಆದರೆ, ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಊಟದ ನಂತರ ಬೌಲಿಂಗ್ ಮಾಡುವಾಗ ಫೀಲ್ಡರ್ ಸಿರಾಜ್ ನಡೆದುಕೊಂಡ ರೀತಿ ಜಡ್ಡು ಅವರನ್ನು ಕೆರಳಿಸಿತು. ಜಡೇಜಾ ಟ್ರಾವಿಸ್ ಹೆಡ್​ಗೆ ಬೌಲಿಂಗ್​ ಮಾಡಿದರು. ಈ ವೇಳೆ ಹೆಡ್​, ಚೆಂಡನ್ನು ಆಫ್‌ಸೈಡ್ ಕಡೆಗೆ ಬಾರಿಸಿ ಸಿಂಗಲ್ ರನ್​ ಪಡೆದರು. ಈ ವೇಳೆ ಚೆಂಡನ್ನು ಸ್ವೀಕರಿಸಿದ ಸಿರಾಜ್, ನಾನ್ ಸ್ಟ್ರೈಕರ್ ತುದಿಯತ್ತ ಚೆಂಡನ್ನು ಜೋರಾಗಿ ಎಸೆದರು. ಆದರೆ, ಆ ಚೆಂಡು ಹೆಡ್ ತಲೆ ಮೇಲೆ ಹಾರಿಬಂದಿತು. ಅದನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಜಡ್ಡು ಅವರ ಬೆರಳುಗಳಿಗೆ ಬಲವಾಗಿ ಬಡಿದಿದೆ. ಇದರಿಂದ ನೋವು ಅನುಭವಿಸಿದ ಜಡೇಜಾ, ಸಿರಾಜ್‌ನತ್ತ ಕೋಪದಿಂದ ನೋಡಿ ಏನೋ ಹೇಳಿದರು. ಜಡ್ಡು ಕೋಪಗೊಂಡಿದ್ದನ್ನು ನೋಡಿ ಸಿರಾಜ್, ಕ್ಷಮಿಸಿ ಎನ್ನುವಂತೆ ಮುಖಭಾವ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೂರನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಬೆಳಗ್ಗೆ 7.30ರ ವೇಳೆಗೆ ಕೇವಲ 9 ರನ್​ಗೆ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಸದ್ಯ ಕೆ.ಎಲ್​. ರಾಹುಲ್​ ಮತ್ತು ವಿರಾಟ್​ ಕೊಹ್ಲಿ ಕ್ರೀಸ್​ನಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net