

ಪಟ್ಟಾಯಾ (ಥಾಯ್ಲೆಂಡ್): ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಆಗಿರುವ ಕನ್ನಡಿಗ ಸುಹಾಸ್ ಯತಿರಾಜ್, ಪ್ರಮೋದ್ ಭಗತ್ ಹಾಗೂ ಕೃಷ್ಣ ನಗರ್ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಪ್ಯಾರಾಲಿಂಪಿಕ್ಸ್ ಬೆಳ್ಳಿ ವಿಜೇತ ಸುಹಾಸ್ ಯತಿರಾಜ್ ಭಾನುವಾರ ನಡೆದ ಎಸ್‌ಎಲ್ 4 ವಿಭಾಗದ ೈನಲ್‌ನಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್‌ರನ್ನು 21-18, 21-18 ಅಂತರದಿಂದ ಸೋಲಿಸಿದರು. 2007ರ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಸುಹಾಸ್‌ಗೆ ಇದು ಚೊಚ್ಚಲ ವಿಶ್ವ ಕಿರೀಟ ಎನಿಸಿದೆ.
ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ಭಗತ್, ಎಸ್‌ಎಲ್ 3 ವಿಭಾಗದಲ್ಲಿ ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ವಿರುದ್ಧ 14-21, 21-15, 21-14 ಗೆದ್ದು ಬೀಗಿದರು. ಇದರೊಂದಿಗೆ ಭಗತ್ ಹ್ಯಾಟ್ರಿಕ್ ಚಾಂಪಿಯನ್ ಎನಿಸಿದರು. ಇದಕ್ಕೂ ಮುನ್ನ 2015 ಮತ್ತು 2019ರಲ್ಲಿ ಚಾಂಪಿಯನ್ ಆಗಿದ್ದರು. ಎಸ್‌ಎಚ್ 6 ವಿಭಾಗದಲ್ಲಿ ಕೃಷ್ಣ 22-20, 22-20 ರಿಂದ ಚೀನಾದ ಲಿನ್ ನೈಲಿ ಎದುರು ಗೆಲುವು ದಾಖಲಿಸಿದರು. ಪುರುಷರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಎರಡು ಕಂಚಿನ ಪದಕ ಜಯಿಸಿದೆ.