ಯಶಸ್ವಿ ಜೈಸ್ವಾಲ್​ ವಿವಾದಾತ್ಮಕ ಔಟ್​; ಭಾರತಕ್ಕೆ ಮುಳುವಾದ ಬಾಂಗ್ಲಾ ಅಂಪೈರ್​ ತೀರ್ಪು!

web jais
Published on

ಮೆಲ್ಬೋರ್ನ್​: ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಕೊನೇ ದಿನ ಗೆಲುವಿಗೆ 340 ರನ್​ ಸವಾಲು ಪಡೆದ ಭಾರತ ತಂಡ, ಅಗ್ರ 3 ವಿಕೆಟ್​ಗಳನ್ನು 33 ರನ್​ಗಳಿಗೆ ಕಳೆದುಕೊಂಡು ಸೋಳಿನ ಸುಳಿಗೆ ಸಿಲುಕಿತು. ಆಗ ಯಶಸ್ವಿ ಜೈಸ್ವಾಲ್​ (84 ರನ್​, 208 ಎಸೆತ, 8 ಬೌಂಡರಿ) ಮತ್ತು ರಿಷಭ್​ ಪಂತ್​ (30 ರನ್​, 104 ಎಸೆತ, 2 ಬೌಂಡರಿ) ಜೋಡಿ 32 ಓವರ್​ಗಳ ಕಾಲ ಆಸೀಸ್​ ಬೌಲರ್​ಗಳನ್ನು ಸತಾಯಿಸಿ ಭಾರತಕ್ಕೆ ಡ್ರಾ ಸಾಧಿಸುವ ಆಸೆ ಮೂಡಿಸಿತು. ಆದರೆ ಚಹಾ ವಿರಾಮದ ಬಳಿಕ ದಿಢೀರ್​ ಕುಸಿತ ಕಂಡ ಭಾರತ 79.1 ಓವರ್​ಗಳಲ್ಲಿ 155 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು. ಭೋಜನ ವಿರಾಮದಿಂದ ಚಹಾ ವಿರಾಮದವರೆಗೆ ಒಂದೂ ವಿಕೆಟ್​ ಬೀಳದಂತೆ ಎಚ್ಚರಿಕೆ ವಹಿಸಿ ಕ್ರೀಸ್​ನಲ್ಲಿ ನಿಂತ ಜೈಸ್ವಾಲ್​-ರಿಷಭ್​ ಪಂತ್​ ಜೋಡಿ ತಾಳ್ಮೆಯ ಬ್ಯಾಟಿಂಗ್​ ಆಸೀಸ್​ ಬೌಲರ್​ಗಳಿಗೆ ಸವಾಲಾಗಿ ಭಾರತಕ್ಕೆ ಡ್ರಾ ಸಾಧಿಸುವ ಅವಕಾಶ ಸೃಷ್ಟಿಸಿತು. ಜೈಸ್ವಾಲ್​ ಕೆಲ ಜೀವದಾನಗಳ ಲಾಭದಿಂದ 200ಕ್ಕೂ ಅಧಿಕ ಎಸೆತ ಎದುರಿಸಿ ನಿಂತರೆ, ಪಂತ್​ ಎಂದಿನ ಆಕ್ರಮಣಕಾರಿ ಆಟವನ್ನು ಮರೆತು ತಾಳ್ಮೆಯೊಂದಿಗೆ 100ಕ್ಕೂ ಅಧಿಕ ಎಸೆತ ಎದುರಿಸಿದರು. 4ನೇ ವಿಕೆಟ್​ಗೆ ಇವರಿಬ್ಬರು 197 ಎಸೆತಗಳಲ್ಲಿ 88 ರನ್​ ಸೇರಿಸಿದರು. ಆದರೆ ಚಹಾ ವಿರಾಮದ ಬಳಿಕ ಅರೆಕಾಲಿಕ ಸ್ಪಿನ್ನರ್​ ಟ್ರಾವಿಸ್​ ಹೆಡ್​ ದಾಳಿಗೆ ಇಳಿದಾಗ ತಾಳ್ಮೆ ಕಳೆದುಕೊಂಡ ಪಂತ್​, ದೊಡ್ಡ ಹೊಡೆತಕ್ಕೆ ಕೈಹಾಕಿ ಲಾಂಗ್​ಆನ್​ನಲ್ಲಿ ಮಿಚೆಲ್​ ಮಾರ್ಷ್​ಗೆ ಕ್ಯಾಚ್​ ನೀಡಿದರು. ಇದರೊಂದಿಗೆ ಭಾರತದ ಕುಸಿತವೂ ಆರಂಭಗೊಂಡಿತು.

ಪಂತ್​ ಔಟಾದ ಬಳಿಕವೂ ಏಕಾಂಗಿ ಹೋರಾಟದ ಮೂಲಕ ಡ್ರಾ ಸಾಧಿಸುವ ಭರವಸೆ ಮೂಡಿಸಿದ್ದ ಜೈಸ್ವಾಲ್​ ವಿವಾದಾತ್ಮಕ ರೀತಿಯಲ್ಲಿ ಔಟಾಗಿದ್ದು ಭಾರತಕ್ಕೆ ಸೋಲು ಖಚಿತಪಡಿಸಿತು. ಕಮ್ಮಿನ್ಸ್​ ಎಸೆದ ಶಾರ್ಟ್​ಬಾಲ್​ಗೆ ಜೈಸ್ವಾಲ್​ ಪುಲ್​ ಮಾಡಲು ಯತ್ನಿಸಿದಾಗ ಚೆಂಡು ಕೀಪರ್​ ಕ್ಯಾರಿ ಕೈಸೇರಿತು. ಆಗ ಚೆಂಡು ಬ್ಯಾಟ್​ ಅಥವಾ ಗ್ಲೌಸ್​ಗೆ ಸ್ಪರ್ಶಿಸಿದೆ ಎಂಬ ಮನವಿಯನ್ನು ಮೈದಾನದ ಅಂಪೈರ್​ ತಿರಸ್ಕರಿಸಿದಾಗ ಆಸೀಸ್​ ಡಿಆರ್​ಎಸ್​ ಮೊರೆ ಹೋಯಿತು. ಆಗ ಅಲ್ಟ್ರಾ ಎಡ್ಜ್​ ತಂತ್ರಜ್ಞಾನದಲ್ಲಿ ಚೆಂಡು ಬ್ಯಾಟ್​ ಅಥವಾ ಗ್ಲೌಸ್​ ಸ್ಪರ್ಶಿಸಿದ ಯಾವ ಕುರುಹೂ ಕಾಣಿಸಲಿಲ್ಲ. ಆದರೆ ಮರುಪ್ರಸಾರವನ್ನು ಬರಿಗಣ್ಣಿನಲ್ಲಿ ನೋಡಿದಾಗ ಚೆಂಡು ಗ್ಲೌಸ್​ಗೆ ಸ್ಪರ್ಶಿಸಿದಂತೆ ಕಾಣಿಸಿದ್ದಲ್ಲದೆ, ಚೆಂಡು ಪಥ ಬದಲಾಯಿಸಿದ ಕಾರಣದಿಂದ ತೃತೀಯ ಅಂಪೈರ್​ ಔಟ್​ ತೀರ್ಪಿತ್ತರು.

ಆಗಿನ್ನೂ ದಿನದಾಟದಲ್ಲಿ 21 ಓವರ್​ ಬಾಕಿ ಉಳಿದಿದ್ದ ಕಾರಣ ಭಾರತಕ್ಕೆ ಡ್ರಾ ಸಾಧಿಸುವ ಹಾದಿಯೂ ಬಹುತೇಕ ಮುಚ್ಚಿಹೋಯಿತು ಮತ್ತು ಆಸೀಸ್​ ಗೆಲುವಿನ ಹಾದಿ ಸುಗಮಗೊಂಡಿತು. ಇದರಿಂದ, ಚೆಂಡು ಎಡ್ಜ್​ ಆದ ಬಗ್ಗೆ ಸ್ನಿಕೋದಲ್ಲಿ ಯಾವುದೇ ತಾಂತ್ರಿಕ ದಾಖಲೆ ಇಲ್ಲದಿದ್ದರೂ, ತೃತೀಯ ಅಂಪೈರ್​ ಬಾಂಗ್ಲಾದೇಶದ ಸೈಕತ್​ ಶರ್ಪುದ್ದೌಲಾ ಔಟ್​ ತೀರ್ಪು ನೀಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.

ಪಂದ್ಯದ ಬಳಿಕ ತೃತೀಯ ಅಂಪೈರ್​ ಬಗ್ಗೆ ಟೀಕಿಸದ ನಾಯಕ ರೋಹಿತ್​ ಶರ್ಮ, ಚೆಂಡು ಜೈಸ್ವಾಲ್​ ಗ್ಲೌಸ್​ ಸ್ಪರ್ಶಿಸಿದಂತೆ ಕಂಡಿದ್ದು ನಿಜ ಎಂದರು. ಆದರೆ ಪ್ರತಿ ಬಾರಿ ಇಂಥ ವಿವಾದಾತ್ಮಕ ನಿರ್ಧಾರಗಳು ಬಂದಾಗ ನಮಗೇ ಯಾಕೆ ನಷ್ಟವಾಗುತ್ತದೆ ಎಂದು ಬೇಸರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net