

ಮುಂಬೈ: ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಗೋವಾ ತಂಡದ ಪರ ಕಣಕ್ಕಿಳಿಯುವ ನಿರ್ಧಾರದಿಂದ ಟೀಮ್ ಇಂಡಿಯಾ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಯು-ಟರ್ನ್ ತೆಗದುಕೊಂಡಿದ್ದು, ಮುಂಬೈ ತಂಡದಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಮುಂಬೈ ಕ್ರಿಕೆಟ್ ಸಂಸ್ಥೆಗೆ (ಎಂಸಿಎ) ಔಪಚಾರಿಕ ಪತ್ರ ಬರೆದಿದ್ದಾರೆ. ಎಂಸಿಎ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಏಪ್ರಿಲ್‌ನಲ್ಲಿ ಎಂಸಿಎಗೆ ಪತ್ರ ಬರೆದು ಗೋವಾ ಪರ ಕಣಕ್ಕಿಳಿಯಲು ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ನೀಡುವಂತೆ ಮನವಿ ಮಾಡಿ ಅಚ್ಚರಿ ಮೂಡಿಸಿದ್ದ 23 ವರ್ಷದ ಜೈಸ್ವಾಲ್, ಸದ್ಯ ವಲಸೆ ಹೋಗುವ ನಿರ್ಧಾರ ಕೈ ಬಿಟ್ಟಿದ್ದಾರೆ. ಜತೆಗೆ ಮುಂಬೈ ತಂಡದಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಈ ಮೇಲ್‌ನಲ್ಲಿ ಎಂಸಿಎಗೆ ಮನವಿ ಮಾಡಿದ್ದಾರೆೆ. ಜತೆಗೆ ತನ್ನ ಕುಟುಂಬವು ಸ್ಥಳಾಂತರಗೊಳ್ಳುತ್ತಿರುವುದರಿಂದ ಗೋವಾ ರಾಜ್ಯಕ್ಕಾಗಿ ಆಡಲು ಯೋಚನೆ ನಡೆಸಲಾಗಿತ್ತು. ಆದರೆ ಯೋಜನೆ ಬದಲಾಗಿದ್ದು, ಬಿಸಿಸಿಐ ಹಾಗೂ ಗೋವಾ ಕ್ರಿಕೆಟ್ ಸಂಸ್ಥೆಗೆ ಎನ್‌ಒಸಿಯನ್ನು ಸಲ್ಲಿಸಿಲ್ಲ ಎಂದು ವಿವರಣೆ ನೀಡಿದ್ದಾರೆ.
ಉತ್ತರ ಪ್ರದೇಶ ಮೂಲದ ಜೈಸ್ವಾಲ್ ಅವರಿಗೆ ನೀಡಿರುವ ಎನ್‌ಒಸಿಯನ್ನು ಎಂಸಿಎ ಹಿಂಪಡೆಯುವುದು ಅನುಮಾನ ಎನ್ನಲಾಗಿದ್ದು, ಬಿಸಿಸಿಐ ಹಾಗೂ ಗೋವಾ ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಸದ್ಯ ಟೆಸ್ಟ್ ತಂಡದಲ್ಲಿ ಕಾಯಂ ಆಟಗಾರ ಎನಿಸಿರುವ ಜೈಸ್ವಾಲ್ ಭವಿಷ್ಯದಲ್ಲಿ ಟೀಮ್ ಇಂಡಿಯಾ ನಾಯಕರಾಗುವ ದೃಷ್ಟಿಯಿಂದ ನಾಯಕತ್ವದ ಅನುಭವ ಪಡೆಯಲು ಗೋವಾಗೆ ವಲಸೆ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಜತೆಗೆ 2025-26ರ ದೇಶೀಯ ಋತುವಿಗೆ ಗೋವಾ ತಂಡ ಪ್ಲೇಟ್‌ನಿಂದ ಎಲೈಟ್ ಗುಂಪಿಗೆ ಬಡ್ತಿ ಪಡೆದುಕೊಂಡಿದೆ. ಮುಂಬೈ ಕ್ರಿಕೆಟ್‌ನೊಂದಿಗೆ ದೀರ್ಘಾವಧಿಯ ಒಡನಾಟ ಹೊಂದಿರುವ ಜೈಸ್ವಾಲ್ 19 ವಯೋಮಿತಿಯ ಮುಂಬೈ ತಂಡದ ಪರವೂ ಆಡಿದ್ದಾರೆ. 2019ರಲ್ಲಿ ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.