

ಪುಣೆ: ಟೀಮ್ ಇಂಡಿಯಾ ಕಳೆದ 12 ವರ್ಷಗಳಲ್ಲಿ ಸತತ 18 ಟೆಸ್ಟ್ ಸರಣಿ ಗೆದ್ದು ತವರಿನಲ್ಲಿ ಸಾಧಿಸಿದ್ದ ಅಮೋಘ ಪ್ರಾಬಲ್ಯಕ್ಕೆ ಪ್ರವಾಸಿ ನ್ಯೂಜಿಲೆಂಡ್ ತಂಡ ಶನಿವಾರ ಬ್ರೇಕ್ ಹಾಕಿದೆ. ಇದರೊಂದಿಗೆ ಭಾರತ ಬರೋಬ್ಬರಿ 4,331 ದಿನಗಳ ಬಳಿಕ ತವರು ನೆಲದಲ್ಲಿ ಟೆಸ್ಟ್ ಸರಣಿ ಕೈಚೆಲ್ಲಿದೆ. ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (77 ರನ್, 65 ರನ್, 9 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ನಡುವೆಯೂ, ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (104ಕ್ಕೆ 6) ದಾಳಿಗೆ ತತ್ತರಿಸಿದ ರೋಹಿತ್ ಶರ್ಮ ಪಡೆ, ಎರಡನೇ ಟೆಸ್ಟ್ ಪಂದ್ಯದಲ್ಲಿ 113 ರನ್‌ಗಳಿಂದ ನ್ಯೂಜಿಲೆಂಡ್ ಎದುರು ಸೋಲು ಅನುಭವಿಸಿದೆ. ಇದರೊಂದಿಗೆ ಭಾರತ 3 ಪಂದ್ಯಗಳ ಸರಣಿಯನ್ನು, ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 0-2ರಿಂದ ಬಿಟ್ಟುಕೊಟ್ಟಿದೆ. ಈ ಮೂಲಕ ಕಿವೀಸ್ ತಂಡ ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಬೀಗಿದೆ. ಕಳೆದ ತಿಂಗಳು ಶ್ರೀಲಂಕಾದಲ್ಲಿ 0-2ರಿಂದ ಸರಣಿ ಸೋತ ಬಳಿಕ ಹೊಸ ನಾಯಕ ಟಾಮ್ ಲಾಥಮ್ ಸಾರಥ್ಯ ಹಾಗೂ ಅನುಭವಿ ಕೇನ್ ವಿಲಿಯಮ್ಸನ್ ಗೈರಿನಲ್ಲಿ ನ್ಯೂಜಿಲೆಂಡ್ ಈ ಐತಿಹಾಸಿಕ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಮಿಚೆಲ್ ಸ್ಯಾಂಟ್ನರ್ (157ಕ್ಕೆ 13) ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ 3ನೇ ಅತ್ಯುತ್ತಮ ನಿರ್ವಹಣೆ ತೋರಿದ ಪ್ರವಾಸಿ ಬೌಲರ್ ಎನಿಸಿದರು. ಎಜಾಜ್ ಪಟೇಲ್ (225ಕ್ಕೆ 14), ಇಯಾನ್ ಬೋಥಂ (106ಕ್ಕೆ 13) ಮೊದಲೆರಡು ಸ್ಥಾನದಲ್ಲಿದ್ದಾರೆ.
6: ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ 6ನೇತಂಡ ನ್ಯೂಜಿಲೆಂಡ್. ಇಂಗ್ಲೆಂಡ್ (5), ವೆಸ್ಟ್ ಇಂಡೀಸ್ (5), ಆಸ್ಟ್ರೇಲಿಯಾ (4), ಪಾಕಿಸ್ತಾನ, ದ.ಆಫ್ರಿಕಾ (ತಲಾ ಒಮ್ಮೆ) ಹಿಂದಿನ ತಂಡಗಳು.
69: ಭಾರತದಲ್ಲಿ 1955ರಿಂದ 69 ವರ್ಷಗಳಲ್ಲಿ ಆಡಿದ 36 ಟೆಸ್ಟ್‌ಗಳಲ್ಲಿ ಕೇವಲ 2ರಲ್ಲಿ ಗೆದ್ದಿದ್ದ ಕಿವೀಸ್ ಈಗ ಒಂದೇ ವಾರದ ಅಂತರದಲ್ಲಿ 2 ಟೆಸ್ಟ್ ಗೆದ್ದಂತಾಗಿದೆ.
2. ಮಿಚೆಲ್ ಸ್ಯಾಂಟ್ನರ್ ಭಾರತ ಎದುರು ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 5 ವಿಕೆಟ್ ಸಾಧನೆ ಮಾಡಿದ 2ನೇ ನ್ಯೂಜಿಲೆಂಡ್ ಸ್ಪಿನ್ನರ್. ಡೇನಿಯಲ್ ವೆಟ್ಟೋರಿ (2000, 2004) ಮೊದಲ ಸಾಧಕ. ಆಸ್ಟ್ರೇಲಿಯಾದ ಸ್ವೀವ್ ಓ ಕ್ೀ (2017) ಕೊನೆಯದಾಗಿ ಈ ಸಾಧನೆ ಮಾಡಿದ ಸ್ಪಿನ್ನರ್.
18: ನ್ಯೂಜಿಲೆಂಡ್ ಎದುರು ಸೋಲಿನೊಂದಿಗೆ ತವರಿನ ನೆಲದಲ್ಲಿ ಸತತ 18 ಟೆಸ್ಟ್ ಸರಣಿ ಗೆಲುವಿನ ಭಾರತದ ಓಟ ಕೊನೆಗೊಂಡಿದೆ. 2012ರಲ್ಲಿ ಇಂಗ್ಲೆಂಡ್ ಎದುರು ಭಾರತ ಕೊನೆಯದಾಗಿ 1-2ರಿಂದ ಟೆಸ್ಟ್ ಸರಣಿ ಸೋಲು ಅನುಭವಿಸಿತ್ತು.
3. ಭಾರತ ತಂಡಕ್ಕೆ ಹಾಲಿ ವರ್ಷ ತವರಿನಲ್ಲಿ ಎದುರಾದ 3ನೇ ಟೆಸ್ಟ್ ಸೋಲು ಇದಾಗಿದೆ. ಇದಕ್ಕೂ ಮುನ್ನ 1969, 1983ರಲ್ಲಿ ಮಾತ್ರ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಮುಗ್ಗರಿಸಿತ್ತು.
4. ರೋಹಿತ್ ಶರ್ಮ ತವರಿನಲ್ಲಿ ಗರಿಷ್ಠ ಟೆಸ್ಟ್ ಪಂದ್ಯ ಸೋತ ನಾಯಕರಲ್ಲಿ ಎರಡನೇ ಸ್ಥಾನಕ್ಕೇರಿ ಅನಪೇಕ್ಷಿತ ದಾಖಲೆ ಬರೆದರು. ಎಂಎಕೆ ಪಟೌಡಿ (9) ಮೊದಲ ಸ್ಥಾನದಲ್ಲಿದ್ದಾರೆ. ಮೊಹಮದ್ ಅಜರುದ್ದೀನ್, ಕಪಿಲ್ ದೇವ್ ಸಹ ತಲಾ 4 ಪಂದ್ಯದಲ್ಲಿ ಸೋಲುಂಡಿದ್ದಾರೆ.
1. ಯಶಸ್ವಿ ಜೈಸ್ವಾಲ್ (1,056) ಕ್ಯಾಲೆಂಡರ್ ವರ್ಷದಲ್ಲಿ ತವರಿನಲ್ಲಿ ಗರಿಷ್ಠ ರನ್ ಬಾರಿಸಿದ ಭಾರತೀಯ ಎನಿಸಿದರು. 1979ರಲ್ಲಿ ಜಿಆರ್ ವಿಶ್ವನಾಥ್ 1,047 ರನ್‌ಗಳಿಸಿದ್ದು ಹಿಂದಿನ ಗರಿಷ್ಠ.
4. ರವೀಂದ್ರ ಜಡೇಜಾ ತವರಿನಲ್ಲಿ 2 ಸಾವಿರ ರನ್ ಹಾಗೂ 200 ಪ್ಲಸ್ ವಿಕೆಟ್ ಸಾಧನೆ ಮಾಡಿದ 4ನೇ ಆಟಗಾರ ಎನಿಸಿದರು.ಇಯಾನ್ ಬೋಥಂ, ಕಪಿಲ್ ದೇವ್, ಸ್ಟುವರ್ಟ್ ಬ್ರಾಡ್ ಮೊದಲ ಮೂವರು.
2: ಭಾರತ ತವರಿನಲ್ಲಿ ಸೋತ ಟೆಸ್ಟ್ ಪಂದ್ಯಗಳಲ್ಲಿ ವಾಷಿಂಗ್ಟನ್ ಸುಂದರ್ (115ಕ್ಕೆ 11) ಅವರದು 2ನೇ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ಎನಿಸಿದೆ. ಜಾವಗಲ್ ಶ್ರೀನಾಥ್ 1999ರಲ್ಲಿ ಕೋಲ್ಕತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 132 ರನ್‌ಗಳಿಗೆ 13 ವಿಕೆಟ್ ಕಬಳಿಸಿದ್ದು ಮೊದಲ ಸ್ಥಾನದಲ್ಲಿದೆ.