

ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭಗೊಂಡಿದೆ. ಈ ನಡುವೆ ಪ್ರಶಸ್ತಿ ಸುತ್ತಿನ ಹೋರಾಟದ ಕೆಲವೊಂದು ನಿಯಮಗಳ ಬಗ್ಗೆ ಚರ್ಚೆ ಶುರುವಾಗಿದೆ. ಪಂದ್ಯ ಡ್ರಾಗೊಂಡು ಟ್ರೋಫಿ ಹಂಚಿಕೆ ಮಾಡುವುದನ್ನು ತಪ್ಪಿಸಲು ಆರನೇ ದಿನವೂ ಆಟವಾಡಿಸುವ ಬಗ್ಗೆ ಐಸಿಸಿ ಚಿಂತನೆ ನಡೆಸಿದೆ. ಜೂನ್ 18ರಂದು ಶುರುವಾಗಲಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಹಾಲಿ ಇರುವ ಪ್ಲೇಯಿಂಗ್ ಕಂಡಿಷನ್ಸ್ ಪ್ರಕಾರ, ಪಂದ್ಯ ಡ್ರಾಗೊಂಡರೆ ಉಭಯ ತಂಡಗಳನ್ನೂ ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುವುದು ಮತ್ತು ಮಳೆಯಿಂದಾಗಿ ಹೆಚ್ಚಿನ ಸಮಯದ ಆಟ ನಷ್ಟಗೊಂಡರೆ ಮಾತ್ರ ಮೀಸಲು ದಿನವಾದ 6ನೇ ದಿನವೂ ಆಟ ನಡೆಯಲಿದೆ. ಆದರೆ ಟ್ರೋಫಿ ಹಂಚಿಕೆ ಮಾಡುವ ಕುರಿತು ಐಸಿಸಿ ಸದ್ಯ ಒಲವು ಹೊಂದಿಲ್ಲ. ಯಾಕೆಂದರೆ ಕಳೆದೆರಡು ವರ್ಷಗಳಿಂದ ನಡೆದು ಬಂದಿರುವ ಡಬ್ಲ್ಯುಟಿಸಿಗೆ ಟ್ರೋಫಿ ಹಂಚಿಕೆ ಸಮರ್ಥ ಮುಕ್ತಾಯ ಎನಿಸುವುದಿಲ್ಲ. ಹೀಗಾಗಿ ಪಂದ್ಯದಲ್ಲಿ ಸ್ಪಷ್ಟ ಲಿತಾಂಶ ಕಂಡುಕೊಳ್ಳುವ ಗರಿಷ್ಠ ಅವಕಾಶಗಳ ಬಗ್ಗೆ ಐಸಿಸಿ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಫೈನಲ್ ಪಂದ್ಯದ ಪ್ಲೇಯಿಂಗ್ ಕಂಡಿಷನ್ ಈ ವಾರವೇ ಅಂತಿಮಗೊಳ್ಳುವ ನಿರೀಕ್ಷೆ ಇದೆ.
* 30 ಗಂಟೆ ಆಟ ಕಡ್ಡಾಯ
ಐಸಿಸಿಯ ಹಾಲಿ ನಿಯಮದ ಪ್ರಕಾರ, ಫೈನಲ್ ಪಂದ್ಯದ 5 ದಿನಗಳ ಆಟದಲ್ಲಿ ಕೆಲ ಗಂಟೆಗಳಷ್ಟು ಆಟ ನಷ್ಟಗೊಂಡರೆ ಮಾತ್ರ 6ನೇ ದಿನವೂ ಆಟ ನಡೆಯಲಿದೆ. 5 ದಿನಗಳಲ್ಲಿ ಕನಿಷ್ಠ 30 ಗಂಟೆಗಳ ಆಟ ನಡೆಯಬೇಕೆಂಬುದು ಐಸಿಸಿಯ ಯೋಜನೆ. ಒಂದು ವೇಳೆ 30 ಗಂಟೆಗಳ ಕಾಲ ಆಟ ನಡೆಯದಿದ್ದರೆ ಮಾತ್ರ ಮೀಸಲು ದಿನ ನಿಗದಿಪಡಿಸಲು ಅವಕಾಶವಿದೆ. ಇದರನ್ವಯ ಹವಾಮಾನದಿಂದ ಪಂದ್ಯದ ಹೆಚ್ಚಿನ ಆಟ ನಷ್ಟವಾದರೆ ಮಾತ್ರ ಮೀಸಲು ದಿನ ಆಟವಿರಲಿದೆ. ಆದರೆ ಐಸಿಸಿ ಇದೀಗ ಓವರ್‌ಗತಿಯ ಲೆಕ್ಕಾಚಾರದ ಬಗ್ಗೆಯೂ ಕಣ್ಣಿಡಲು ಬಯಸಿದೆ. ಇದರನ್ವಯ 5 ದಿನಗಳ ಆಟದಲ್ಲಿ ಗರಿಷ್ಠ 450 ಓವರ್ ಆಟ ನಡೆಯುವಂತೆ ಮಾಡಲು ಐಸಿಸಿ ಯೋಜಿಸಿದೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಡ್ರಾನಲ್ಲಿ ಅಂತ್ಯಗೊಳ್ಳುವುದರ ಬದಲಾಗಿ ಯಾವುದಾದರೂ ಒಂದು ತಂಡ ಟ್ರೋಫಿ ಜಯಿಸಬೇಕೆಂಬ ಉದ್ದೇಶದಿಂದ ಕೆಲವೊಂದು ಬದಲಾವಣೆ ತರಲು ಐಸಿಸಿ ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.
*ಜೂನ್ 1ಕ್ಕೆ ಡಬ್ಲ್ಯುಟಿಸಿ ಭವಿಷ್ಯದ ಚರ್ಚೆ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೊದಲ ಆವೃತ್ತಿ ಮುಕ್ತಾಯ ಹಂತಕ್ಕೆ ಬಂದಿರುವ ನಡುವೆ ಜೂನ್ 1 ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ 2021ರ ಜುಲೈನಿಂದ 2023ರ ಏಪ್ರಿಲ್‌ವರೆಗೆ ನಡೆಯಲಿರುವ ಮುಂದಿನ ಆವೃತ್ತಿಯ ಭವಿಷ್ಯದ ಬಗ್ಗೆ ಚರ್ಚೆಗಳು ನಡೆಯಲಿವೆ. ಭಾರತ-ಇಂಗ್ಲೆಂಡ್ ತಂಡಗಳ ಮುಖಾಮುಖಿಯೊಂದಿಗೆ 2021-23ರ ಆವೃತ್ತಿ ಶುರುವಾಗಲಿದ್ದು, ಇದರ ಅಂಕ ಪದ್ಧತಿ ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷ ಕೋವಿಡ್-19 ರಿಂದಾಗಿ ಕೆಲವೊಂದು ಸರಣಿಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಇದರಿಂದ ಕೊನೆಗೆ ಡಬ್ಲ್ಯುಟಿಸಿ ಅಂಕ ಪದ್ಧತಿಯನ್ನೇ ಬದಲಾಯಿಸಲಾಗಿತ್ತು. ಒಟ್ಟು ಅಂಕಗಳಿಗೆ ಬದಲಾಗಿ ಶೇಕಡವಾರು ಅಂಕದ ಅನ್ವಯ ಫೈನಲ್‌ಗೇರುವ 2 ತಂಡಗಳನ್ನು ನಿರ್ಧರಿಸಲಾಗಿತ್ತು. ಈ ಬದಲಾವಣೆಯ ಬಗ್ಗೆ ಸಾಕಷ್ಟು ಟೀಕೆಗಳು ಬಂದಿದ್ದವು. ಅಲ್ಲದೆ 2019-21ರ ಡಬ್ಲ್ಯುಟಿಸಿ ಮೊದಲ ಆವೃತ್ತಿ ಅಷ್ಟೇನೂ ಯಶಸ್ಸು ಕಂಡಿಲ್ಲ ಎಂದೂ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಡಬ್ಲ್ಯುಟಿಸಿ ಭವಿಷ್ಯದ ಬಗ್ಗೆ ಐಸಿಸಿ ಚರ್ಚೆ ನಡೆಸಲಿದೆ.
* 2ನೇ ಟೆಸ್ಟ್‌ಗೆ ಪ್ರತಿದಿನ 18 ಸಾವಿರ ಪ್ರೇಕ್ಷಕರು
ಜೂನ್ 10ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ವೀಕ್ಷಿಸಲು ಪ್ರತಿದಿನ ಆರಂಭಿಕ ಮೂರು ದಿನಗಳ ಕಾಲ ತಲಾ 18 ಸಾವಿರ ಪ್ರೇಕ್ಷಕರಿಗೆ ಪ್ರವೇಶ ನೀಡಲು ಬ್ರಿಟನ್ ಸರ್ಕಾರ ಅನುಮತಿ ನೀಡಿದೆ. ಇದಕ್ಕೂ ಮೊದಲು ಶೇಕಡ 25 ಮಂದಿಗಷ್ಟೇ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಇದೀಗ ವಾರ್ವಿಕ್‌ಷೈರ್ ಶೇಕಡ 70 ಪ್ರೇಕ್ಷಕರಿಗೆ ಅವಕಾಶ ನೀಡುವುದಾಗಿ ಬುಧವಾರ ಘೋಷಿಸಿದೆ. ಆದರೆ, ಜೂನ್ ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ರತಿದಿನ 7,500 ಅಥವಾ ಶೇಕಡ 25 ಮಂದಿಗಷ್ಟೇ ಅವಕಾಶ ನೀಡಲಾಗಿದೆ.