ಟೆಸ್ಟ್​ ವಿಶ್ವಕಪ್ ಫೈನಲ್​ ಡ್ರಾ ಆದರೆ? ಐಸಿಸಿ ಪ್ಲೇಯಿಂಗ್​ ಕಂಡಿಷನ್​ ಏನು ಹೇಳುತ್ತೆ?

wtc final web
Published on

ದುಬೈ: ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ ಪಂದ್ಯದ ಪ್ಲೇಯಿಂಗ್​ ಕಂಡಿಷನ್​ ಅನ್ನು ಐಸಿಸಿ ಕೊನೆಗೂ ಶುಕ್ರವಾರ ಪ್ರಕಟಿಸಿದೆ. ಇದರನ್ವಯ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಫೈನಲ್​ ಪಂದ್ಯ ಟೈಗೊಂಡರೆ ಡ್ರಾ ಅಥವಾ ಟೈಗೊಂಡರೆ ಉಭಯ ತಂಡಗಳನ್ನೂ ಜಂಟಿ ಚಾಂಪಿಯನ್​ಗಳೆಂದು ಘೋಷಿಸಲಾಗುವುದು. ಅಲ್ಲದೆ 5 ದಿನಗಳಲ್ಲಿ ಹೆಚ್ಚಿನ ಆಟ ನಷ್ಟಗೊಂಡರಷ್ಟೇ ಮೀಸಲು ದಿನವಾದ 6ನೇ ದಿನವೂ ಪಂದ್ಯ ಮುಂದುವರಿಯಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಸ್ಪಷ್ಟ ಫಲಿತಾಂಶ ನಿರ್ಧಾರಕ್ಕಾಗಿ 5 ದಿನಗಳ ಆಟದಲ್ಲಿ ಪಂದ್ಯ ಡ್ರಾಗೊಂಡಾಗ 6ನೇ ದಿನವೂ ಆಟವಾಡಿಸುವ ಬಗ್ಗೆ ಐಸಿಸಿ ಚಿಂತನೆ ನಡೆಸಿದ್ದರೂ, ಮಳೆ ಅಥವಾ ಇತರ ಪ್ರತಿಕೂಲ ಹವಾಮಾನ ಮತ್ತಿತರ ಕಾರಣದಿಂದಾಗಿ 5 ದಿನಗಳಲ್ಲಿ ಹೆಚ್ಚಿನ ಸಮಯ ವ್ಯರ್ಥಗೊಂಡರಷ್ಟೇ ಮೀಸಲು ದಿನವೂ ಆಟವಾಡಿಸಲಷ್ಟೇ ನಿರ್ಧರಿಸಿದೆ. ಜೂನ್​ 18ರಿಂದ 22ರವರೆಗೆ ಪಂದ್ಯ ನಿಗದಿಯಾಗಿದ್ದು, ಅಗತ್ಯ ಬಿದ್ದರಷ್ಟೇ ಮೀಸಲು ದಿನವಾದ ಜೂನ್​ 23ರಂದೂ ಆಟ ಮುಂದುವರಿಯಲಿದೆ.

ಡಬ್ಲ್ಯುಟಿಸಿ ಆರಂಭಕ್ಕೆ ಮುನ್ನ 2018ರ ಜೂನ್​ನಲ್ಲಿ ರೂಪಿಸಲಾಗಿದ್ದ ನಿಯಮವನ್ನು ಐಸಿಸಿ ಈಗಲೂ ಯಾವುದೇ ಬದಲಾವಣೆ ಇಲ್ಲದೆ ಉಳಿಸಿಕೊಂಡಿದೆ. ಇದರನ್ವಯ ಸ್ಪಷ್ಟ ಫಲಿತಾಂಶ ಕಾಣುವ ಏಕೈಕ ಕಾರಣಕ್ಕಾಗಿ 6ನೇ ದಿನವೂ ಆಟ ನಡೆಯುವುದಿಲ್ಲ. ಸಮಯ ವ್ಯರ್ಥಗೊಂಡ ಸಂದರ್ಭದಲ್ಲಷ್ಟೇ ಮೀಸಲು ದಿನ ಆಟ ನಡೆಯಲಿದೆ. ಇಲ್ಲದಿದ್ದರೆ ಪಂದ್ಯವನ್ನು ಡ್ರಾ ಎಂದೇ ಘೋಷಿಸಿ ಟ್ರೋಫಿಯನ್ನು ಹಂಚಲಾಗುವುದು.

5ನೇ ದಿನ 6ನೇ ದಿನದ ಬಗ್ಗೆ ನಿರ್ಧಾರ
ಡಬ್ಲ್ಯುಟಿಸಿ ಫೈನಲ್​ ಪಂದ್ಯದ ನಿಗದಿತ 5 ದಿನಗಳಲ್ಲೂ ಪೂರ್ಣ ಆಟ ನಡೆಯುವಂತೆ ಮಾಡಲು ಐಸಿಸಿ ಪ್ರಯತ್ನಿಸಲಿದೆ. ಅಲ್ಲದೆ ಆರಂಭಿಕ ದಿನಗಳಲ್ಲಿ ಆಟ ನಷ್ಟಗೊಂಡಾಗ ಅದನ್ನು ಎಂದಿನಂತೆ ಉಳಿದ ದಿನಗಳಲ್ಲೇ ಹೆಚ್ಚುವರಿ ಆಟದ ಮೂಲಕ ಸರಿದೂಗಿಸಲು ಪ್ರಯತ್ನಿಸಲಾಗುವುದು. ಒಂದು ವೇಳೆ ಇದರಿಂದಲೂ ನಷ್ಟಗೊಂಡ ಆಟವನ್ನು ಸರಿದೂಗಿಸಲು ಸಾಧ್ಯವಾಗದಿದ್ದರಷ್ಟೇ ಪಂದ್ಯ 6ನೇ ದಿನಕ್ಕೆ ವಿಸ್ತರಣೆಯಾಗಲಿದೆ. 6ನೇ ದಿನ ಆಟ ಆಡಲಾಗುವುದೇ, ಇಲ್ಲವೇ ಎಂಬ ಬಗ್ಗೆ ಅಂಪೈರ್​ಗಳು, 5ನೇ ದಿನದ ಅಂತಿಮ ಅವಧಿಯ ಆಟ ಪ್ರಾರಂಭಕ್ಕೆ ಮುನ್ನ ಪ್ರಕಟಿಸಲಿದ್ದಾರೆ.

ಡ್ಯೂಕ್​ ಚೆಂಡು ಬಳಕೆ
ಡಬ್ಲ್ಯುಟಿಸಿ ಫೈನಲ್​ ಪಂದ್ಯವನ್ನು ಆಡಲು ಗ್ರೇಡ್​ 1 ಡ್ಯೂಕ್​ ಕೆಂಪು ಚೆಂಡುಗಳನ್ನು ಬಳಸಲಾಗುವುದು ಎಂದು ಐಸಿಸಿ ತಿಳಿಸಿದೆ. ಭಾರತ-ಕಿವೀಸ್​ ಎರಡೂ ತಂಡಗಳಿಗೆ ಇದು ತೀರಾ ಪರಿಚಿತ ಚೆಂಡುಗಳಲ್ಲ. ಯಾಕೆಂದರೆ ಭಾರತ ತಂಡ ತವರಿನ ಟೆಸ್ಟ್​ ಸರಣಿಗಳಲ್ಲಿ ಎಸ್​ಜಿ ಟೆಸ್ಟ್​ ಚೆಂಡುಗಳಲ್ಲಿ ಆಡಿದರೆ, ಕಿವೀಸ್​ ತಂಡ ಕೂಕಬುರಾ ಚೆಂಡುಗಳಲ್ಲಿ ಆಡುತ್ತದೆ.

ಏಕದಿನ ಸೂಪರ್​ ಲೀಗ್​ ನಿಯಮ ಬದಲು
ಐಸಿಸಿ ಹಾಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ ಸೂಪರ್​ ಲೀಗ್​ನ 3 ನಿಯಮಗಳಲ್ಲೂ ಬದಲಾವಣೆ ತಂದಿದೆ. ಇದರನ್ವಯ ಮೈದಾನದ ಅಂಪೈರ್​ ಶಾರ್ಟ್​ ರನ್​ ತೀರ್ಪು ನೀಡಿದಾಗ ತೃತೀಯ ಅಂಪೈರ್​, ಮುಂದಿನ ಎಸೆತಕ್ಕೆ ಮುನ್ನವೇ ಈ ತೀಪಿರ್ನ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ. ಇದಲ್ಲದೆ ಎಲ್​ಬಿಡಬ್ಲ್ಯು ನಿಯಮದಲ್ಲಿ ಸಣ್ಣ ಬದಲಾವಣೆ ತರಲಾಗಿದೆ. ಜತೆಗೆ ಎಲ್​ಬಿಡಬ್ಲ್ಯು ತೀರ್ಪಿನ ಡಿಆರ್​ಎಸ್​ ವೇಳೆ ಸ್ಟಂಪ್ಸ್​ನ ಮೇಲ್ಭಾಗದವರೆಗೆ ವಿಕೆಟ್​ ಝೊನ್​ ಪರಿಗಣನೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net