ಪ್ಯಾರಿಸ್​ನಲ್ಲಿ ಇಂದಿನಿಂದ ಕುಸ್ತಿ ಸ್ಪರ್ಧೆಗಳು; ಭಾರತದ ಪೈಲ್ವಾನರು ಸತತ 5ನೇ ಒಲಿಂಪಿಕ್ಸ್​ನಲ್ಲೂ ಗೆಲ್ಲುವರೇ ಪದಕ?

web wresling
Published on

ಪ್ಯಾರಿಸ್​: ಭಾರತಕ್ಕೆ ಕಳೆದ 4 ಒಲಿಂಪಿಕ್ಸ್​ಗಳಲ್ಲಿ 6 ಪದಕಗಳನ್ನು (2 ಬೆಳ್ಳಿ, 4 ಕಂಚು) ಗೆದ್ದುಕೊಟ್ಟಿರುವ ಕುಸ್ತಿ ಸ್ಪರ್ಧೆಗೆ ಸೋಮವಾರ ಚಾಲನೆ ಸಿಗಲಿದೆ. ಈ ಬಾರಿ ಓರ್ವ ಪುರುಷ ಪೈಲ್ವಾನ್​ ಸಹಿತ ಆರು ಭಾರತೀಯರು ಕಣದಲ್ಲಿದ್ದು, ಸತತ 5ನೇ ಒಲಿಂಪಿಕ್ಸ್​ನಲ್ಲೂ ಕುಸ್ತಿಪಟುಗಳಿಂದ ಪದಕ ಬೇಟೆ ಮುಂದುವರಿಯುವ ನಿರೀಕ್ಷೆ ಇದೆ.

ನಿಶಾ ದಹಿಯಾ 68 ಕೆಜಿ ವಿಭಾಗದಲ್ಲಿ ಮೊದಲ ದಿನವೇ ಕಣಕ್ಕಿಳಿಯಲಿದ್ದು, ಭಾರತದ ಕುಸ್ತಿ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ. ವಿನೇಶ್​ ಪೋಗಟ್​ (50 ಕೆಜಿ ವಿಭಾಗ-ಸ್ಪರ್ಧೆ: ಆ.6-7), ಅಂತಿಮ್​ ಪಾಂಗಲ್​ (53 ಕೆಜಿ ವಿಭಾಗ-ಸ್ಪರ್ಧೆ: ಆ. 7-8), ಅಂಶು ಮಲಿಕ್​ (57 ಕೆಜಿ ವಿಭಾಗ-ಸ್ಪರ್ಧೆ: ಆ.8-9), ಅಮನ್​ ಸೆಹ್ರಾವತ್​ (57 ಕೆಜಿ ವಿಭಾಗ-ಸ್ಪರ್ಧೆ: ಆ. 8-9), ರೀತಿಕಾ ಹೂಡಾ (76 ಕೆಜಿ ವಿಭಾಗ-ಆ.10-11) ಕಣದಲ್ಲಿರುವ ಪ್ರಮುಖ ಕುಸ್ತಿಪಟುಗಳಾಗಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಕುಸ್ತಿ ಅಖಾಡದ ಹೊರಗೆಯೇ ಹೆಚ್ಚು ಸುದ್ದಿಯಲ್ಲಿದ್ದ ಅನುಭವಿ ಕುಸ್ತಿಪಟು ವಿನೇಶ್​ ಪೋಗಟ್​ 3ನೇ ಬಾರಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿದ್ದು, ಪದಕದ ಕನಸು ನನಸಾಗಿಸುವ ಹಂಬಲದಲ್ಲಿದ್ದಾರೆ. ಅಂತಿಮ್​ ಪಾಂಗಲ್​ ಭಾರತದ ಮತ್ತೋರ್ವ ಪ್ರಮುಖ ಪದಕ ಆಕಾಂಯಾಗಿದ್ದಾರೆ.

ಪುರುಷರ 57 ಕೆಜಿ ವಿಭಾಗದಲ್ಲಿ ಕಳೆದ ಬಾರಿ ರವಿ ದಹಿಯಾ ರಜತ ಪದಕ ಜಯಿಸಿದ್ದರು. ಈ ಬಾರಿ ಅವರನ್ನು ಹಿಮ್ಮೆಟ್ಟಿಸಿ ಅಮನ್​ ಸೆಹ್ರಾವತ್​ ಅರ್ಹತೆ ಸಂಪಾದಿಸಿದ್ದಾರೆ. ಹೀಗಾಗಿ ಅವರ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net