ಅಮಾನತು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಕುಸ್ತಿಪಟು ಭಜರಂಗ್

New-Project-3-2
Published on

ನವದೆಹಲಿ: ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದಿಂದ (ನಾಡಾ) ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಭಾರತದ ಅನುಭವಿ ಕುಸ್ತಿಪಟು ಭಜರಂಗ್ ಪೂನಿಯಾ, ಅಮಾನತು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರುವ ಮೂಲಕ ಭಜರಂಗ್ ರಾಜಕೀಯಕ್ಕೂ ಪ್ರವೇಶಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಜರಂಗ್, ಅಕ್ಟೋಬರ್ 28ರಿಂದ 31ರವರೆಗೆ ನಿಗದಿಯಾಗಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ನಾಡಾ ತಾತ್ಕಾಲಿಕ ಅಮಾನತು ಆದೇಶ ಅಡ್ಡಿಯಾಗಿದ್ದು, ಒಂದು ವೇಳೆ ಅಮಾನತು ಆದೇಶ ಹಿಂಪಡೆಯದಿದ್ದರೆ ಬಲವಂತವಾಗಿ ಕುಸ್ತಿಯಿಂದ ನಿವೃತ್ತಿ ಹೊಂದಬೇಕಾಗುತ್ತದೆ ಎಂದು ಹೈಕೋರ್ಟ್‌ನಲ್ಲಿ ಕಾನೂನು ತಂಡದ ಮೂಲಕ ವಾದ ಮಂಡಿಸಿದ್ದಾರೆ. ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ ವೇಳೆ ಡೋಪಿಂಗ್ ಪರೀಕ್ಷೆಗೆ ಮೂತ್ರದ ಸ್ಯಾಂಪಲ್ ನೀಡಲು ನಿರಾಕರಿಸಿದ್ದ ಭಜರಂಗ್, ಏಪ್ರಿಲ್ 23ರಂದು ಮೊದಲ ಬಾರಿಗೆ ನಾಡಾದಿಂದ ನಿಷೇಧಕ್ಕೆ ಒಳಪಟ್ಟಿದ್ದರು. ಜತೆಗೆ ವಿಶ್ವ ಕುಸ್ತಿ ಸಂಸ್ಥೆಯ ಆಡಳಿತ ಮಂಡಳಿಯೂ ಈ ಅಮಾನತು ಆದೇಶವನ್ನು ಎತ್ತಿಹಿಡಿದಿತ್ತು. ಬಳಿಕ ಜೂನ್ 21 ರಂದು ನಾಡಾ 2ನೇ ಬಾರಿಗೆ ಅಮಾನತು ಮಾಡಿ, ಯಾವುದೇ ಅಭ್ಯಾಸ ಶಿಬಿರ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net