WPL-2025: ಇಂದು ಡೆಲ್ಲಿ ಕ್ಯಾಪಿಟಲ್ಸ್​-ಮುಂಬೈ ಇಂಡಿಯನ್ಸ್​ ಫೈನಲ್​ ಫೈಟ್​; ಯಾರಿಗೆ ಕಪ್?

web dc vs mi
Published on

ಮುಂಬೈ: ಸತತ ಮೂರನೇ ಪ್ರಯತ್ನದಲ್ಲಾದರೂ ಟ್ರೋಫಿ ಒಲಿಸಿಕೊಳ್ಳುವ ಹಂಬಲದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಎರಡನೇ ಬಾರಿಗೆ ಪ್ರಶಸ್ತಿ ಜಯಿಸುವ ತವಕದಲ್ಲಿರುವ ಮುಂಬೈ ಇಂಡಿಯನ್ಸ್​ ತಂಡಗಳು ವುಮೆನ್ಸ್​ ಪ್ರೀಮಿಯರ್​ ಲೀಗ್​ 3ನೇ ಆವೃತ್ತಿಯಲ್ಲಿ ಶನಿವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆಯಲಿರುವ ಕಾದಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ನಿರೀಕ್ಷೆ ಇದ್ದು, ಯಾರೇ ಗೆದ್ದರೂ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

ಡೆಲ್ಲಿ ತಂಡ ಸತತ 3ನೇ ಆವೃತ್ತಿಯ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ನೇರವಾಗಿ ಫೈನಲ್​ಗೇರಿದ್ದರೆ, ಮುಂಬೈ ತಂಡ ಎಲಿಮಿನೇಟರ್​ನಲ್ಲಿ ಗುಜರಾತ್​ ಜೈಂಟ್ಸ್​ ಎದುರು ಸುಲಭ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದೆ. ಹರ್ಮಾನ್​ಪ್ರೀತ್​ ಕೌರ್​ ಪಡೆ ಚೊಚ್ಚಲ ಆವೃತ್ತಿಯ ಫೈನಲ್​ನಲ್ಲಿ ಡೆಲ್ಲಿಯನ್ನು ಮಣಿಸಿದ ಹುರುಪಿನಲ್ಲಿದ್ದರೆ, ಮೆಗ್​ ಲ್ಯಾನಿಂಗ್​ ಪಡೆ ಹಾಲಿ ಆವೃತ್ತಿಯ ಲೀಗ್​ ಹಂತದ ಎರಡೂ ಮುಖಾಮುಖಿಗಳಲ್ಲಿ ಮುಂಬೈಯನ್ನು ಮಣಿಸಿದ ಆತ್ಮವಿಶ್ವಾಸದಲ್ಲಿದೆ.

ಮುಂಬೈಗೆ ಸೀವರ್​-ಮ್ಯಾಥ್ಯೂಸ್​ ಶಕ್ತಿ

ಹಾಲಿ ಟೂರ್ನಿಯ ಗರಿಷ್ಠ ರನ್​ ಸ್ಕೋರರ್​ ನಥಾಲಿ ಸೀವರ್​-ಬ್ರಂಟ್​ (493) ಮತ್ತು ಗರಿಷ್ಠ ವಿಕೆಟ್​ ಸಾಧಕಿ ಹ್ಯಾಲಿ ಮ್ಯಾಥ್ಯೂಸ್​ (17) ಈ ಬಾರಿ ಮುಂಬೈ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಸೀವರ್​ 9 ವಿಕೆಟ್​ ಕೂಡ ಕಬಳಿಸಿದ್ದರೆ, ಮ್ಯಾಥ್ಯೂಸ್​ 304 ರನ್​ ಕೂಡ ಗಳಿಸಿ ಆಲ್ರೌಂಡ್​ ನಿರ್ವಹಣೆ ತೋರಿದ್ದಾರೆ. ಇವರಿಗೆ ನಾಯಕಿ ಹರ್ಮಾನ್​ಪ್ರೀತ್​ ಕೌರ್​ (236 ರನ್​), ಅಮೆಲಿಯಾ ಕೆರ್​ (16 ವಿಕೆಟ್​), ಶಬ್ನಿಮ್​ ಇಸ್ಮಾಯಿಲ್​ (8 ವಿಕೆಟ್​) ಉತ್ತಮ ಬೆಂಬಲ ಒದಗಿಸಿದ್ದಾರೆ. ಭಾರತೀಯ ಆಟಗಾರ್ತಿಯರ ಅಸ್ಥಿರ ನಿರ್ವಹಣೆಯೊಂದೇ ಮುಂಬೈಗೆ ಹಿನ್ನಡೆ ಎನಿಸಿದೆ.

*ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​

*ಮುಖಾಮುಖಿ: 7

ಡೆಲ್ಲಿ ಕ್ಯಾಪಿಟಲ್ಸ್​: 4

ಮುಂಬೈ ಇಂಡಿಯನ್ಸ್​: 3

ಡೆಲ್ಲಿಗೆ ಆರಂಭಿಕರೇ ಬಲ

ಡೆಲ್ಲಿ ತಂಡಕ್ಕೆ ನಾಯಕಿ ಮೆಗ್​ ಲ್ಯಾನಿಂಗ್​ ಮತ್ತು ಶೆಾಲಿ ವರ್ಮರ ಆರಂಭಿಕ ಜೋಡಿಯೇ ಹೆಚ್ಚಿನ ಪಂದ್ಯಗಳಲ್ಲಿ ಬಲ ತುಂಬಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿ 2 ವರ್ಷ ಕಳೆದಿದ್ದರೂ ಲ್ಯಾನಿಂಗ್​ ಈಗಲೂ ಬ್ಯಾಟಿಂಗ್​ ಲಯ ಉಳಿಸಿಕೊಂಡಿದ್ದು, ಟೂರ್ನಿಯಲ್ಲಿ 3 ಅರ್ಧಶತಕ ಸಹಿತ 263 ರನ್​ ಬಾರಿಸಿದ್ದಾರೆ. ಶೆಫಾಲಿ ವರ್ಮ ಟೂರ್ನಿಯಲ್ಲಿ ಸರ್ವಾಧಿಕ 16 ಸಿಕ್ಸರ್​ ಸಹಿತ 300 ರನ್​ ಬಾರಿಸಿದ್ದಾರೆ. ಟೂರ್ನಿಯ ಅಗ್ರ 7 ಗರಿಷ್ಠ ರನ್​ಸ್ಕೋರರ್​ಗಳಲ್ಲಿ ಅವರೊಬ್ಬರೇ ಭಾರತೀಯರಾಗಿದ್ದಾರೆ. ಇನ್ನು ಜೆಸ್​ ಜೊನಾಸೆನ್​ (137 ರನ್​, 11 ವಿಕೆಟ್​) ಆಲ್ರೌಂಡ್​ ನಿರ್ವಹಣೆಯೊಂದಿಗೆ ಮಿಂಚಿದ್ದರೆ, ಅನುಭವಿ ವೇಗಿ ಶಿಖಾ ಪಾಂಡೆ (11 ವಿಕೆಟ್​) ಬೌಲಿಂಗ್​ನಲ್ಲಿ ಮಿಂಚುತ್ತಿದ್ದಾರೆ. ಲೀಗ್​ ಹಂತದಲ್ಲಿ ಮುಂಬೈಯನ್ನು 123 ರನ್​ಗಳಿಗೆ ನಿಯಂತ್ರಿಸಿ ಡೆಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಎಲಿಮಿನೇಟರ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿರುವ ಮುಂಬೈ, ಫೈನಲ್​ನಲ್ಲಿ ಡೆಲ್ಲಿಗೆ ಹೆಚ್ಚಿನ ಸವಾಲೊಡ್ಡಬಹುದು.

ಫೈನಲ್​ ಹಾದಿ

ಡೆಲ್ಲಿ ಕ್ಯಾಪಿಟಲ್ಸ್​

*ಮುಂಬೈ ವಿರುದ್ಧ 2 ವಿಕೆಟ್​ ಜಯ

*ಆರ್​ಸಿಬಿ ವಿರುದ್ಧ 8 ವಿಕೆಟ್​ ಸೋಲು

*ಯುಪಿ ವಿರುದ್ದ 7 ವಿಕೆಟ್​ ಗೆಲುವು

*ಯುಪಿ ವಿರುದ್ಧ 33 ರನ್​ ಸೋಲು

*ಗುಜರಾತ್​ ವಿರುದ್ಧ 6 ವಿಕೆಟ್​ ಜಯ

*ಮುಂಬೈ ವಿರುದ್ಧ 9 ವಿಕೆಟ್​ ಗೆಲುವು

*ಆರ್​ಸಿಬಿ ವಿರುದ್ಧ 9 ವಿಕೆಟ್​ ಗೆಲುವು

*ಗುಜರಾತ್​ ವಿರುದ್ಧ 5 ವಿಕೆಟ್​ ಸೋಲು

ಮುಂಬೈ ಇಂಡಿಯನ್ಸ್​

*ಡೆಲ್ಲಿ ವಿರುದ್ಧ 2 ವಿಕೆಟ್​ ಸೋಲು

*ಗುಜರಾತ್​ ವಿರುದ್ಧ 5 ವಿಕೆಟ್​ ಜಯ

*ಆರ್​ಸಿಬಿ ವಿರುದ್ದ 4 ವಿಕೆಟ್​ ಗೆಲುವು

*ಯುಪಿ ವಿರುದ್ಧ 8 ವಿಕೆಟ್​ ಗೆಲುವು

*ಡೆಲ್ಲಿ ವಿರುದ್ಧ 9 ವಿಕೆಟ್​ ಸೋಲು

*ಯುಪಿ ವಿರುದ್ಧ 6 ವಿಕೆಟ್​ ಗೆಲುವು

*ಗುಜರಾತ್​ ವಿರುದ್ಧ 9 ರನ್​ ಜಯ

*ಆರ್​ಸಿಬಿ ವಿರುದ್ಧ 11 ರನ್​ ಸೋಲು

*ಗುಜರಾಥ್​ ವಿರುದ್ಧ 47 ರನ್​ ಜಯ

*2: ಮುಂಬೈ ಇಂಡಿಯನ್ಸ್​ ಗೆದ್ದರೆ ಡಬ್ಲ್ಯುಪಿಎಲ್​ನಲ್ಲಿ 2 ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡವೆನಿಸಲಿದೆ.

*6: ಟೂರ್ನಿಯ ಚಾಂಪಿಯನ್​ ತಂಡ 6 ಕೋಟಿ ರೂ. ಬಹುಮಾನ ಗಳಿಸಿದರೆ, ರನ್ನರ್​ಅಪ್​ ತಂಡ 3 ಕೋಟಿ ರೂ. ಪಡೆಯಲಿದೆ.

ನೀಗುವುದೇ ಡೆಲ್ಲಿ ಪ್ರಶಸ್ತಿ ಬರ?

ಐಪಿಎಲ್​ ಅಥವಾ ಡಬ್ಲ್ಯುಪಿಎಲ್​ನಲ್ಲಿ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲದ ನಿರಾಸೆ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್​ ಈ ಸಲವಾದರೂ ತನ್ನ ಬರ ನೀಗಿಸಿಕೊಳ್ಳುವುದೇ ಎಂಬ ಕುತೂಹಲವಿದೆ. ಐಪಿಎಲ್​ನಲ್ಲಿ 2020ರಲ್ಲಿ ಫೈನಲ್​ಗೇರಿ ರನ್ನರ್​ಅಪ್​ಗೆ ತೃಪ್ತಿಪಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್​, ಡಬ್ಲ್ಯುಪಿಎಲ್​ನಲ್ಲೂ 2023 ಮತ್ತು 2024ರ ಆವೃತ್ತಿಯ ಫೈನಲ್​ನಲ್ಲಿ ನಿರಾಸೆ ಅನುಭವಿಸಿತ್ತು. ಕಳೆದ ವರ್ಷ ಆರ್​ಸಿಬಿಗೆ ಮಹಿಳೆಯರೇ ಮೊದಲ ಕಪ್​ ಗೆದ್ದುಕೊಟ್ಟಿದ್ದರು. ಈ ಬಾರಿ ಡೆಲ್ಲಿ ಮಹಿಳೆಯರೂ ಅದೇ ಜೋಶ್​ನಲ್ಲಿದ್ದಾರೆ.

ನಿಕಿಗೆ ಮತ್ತೆ ಲಕ್​?

ಳೆದ ತಿಂಗಳಷ್ಟೇ 19 ವಯೋಮಿತಿ ಭಾರತ ತಂಡದ ನಾಯಕಿಯಾಗಿ ಮಹಿಳೆಯರ ಟಿ20 ವಿಶ್ವಕಪ್​ ಗೆದ್ದುಕೊಂಡಿದ್ದ ಕನ್ನಡತಿ ನಿಕಿ ಪ್ರಸಾದ್​, ಈ ಬಾರಿ ಡಬ್ಲ್ಯುಪಿಎಲ್ ಫೈನಲ್​ನಲ್ಲಿ ಕಾಣಿಸಿಕೊಳ್ಳಲಿರುವ ಏಕೈಕ ಕನ್ನಡತಿ. ಡೆಲ್ಲಿ ತಂಡದ ಪರ ಟೂರ್ನಿಯ ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದಲ್ಲದೆ ಉಪಯುಕ್ತ ಬ್ಯಾಟಿಂಗ್​ ನಿರ್ವಹಣೆಯೊಂದಿಗೆ ಗೆಲುವಿನ ರೂವಾರಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಆದರೆ ನಂತರದ ನಿಕಿಗೆ ಹೆಚ್ಚಿನ ಬ್ಯಾಟಿಂಗ್​ ಅವಕಾಶ ಲಭಿಸಿರಲಿಲ್ಲ. ಇದೀಗ ಒಂದೇ ತಿಂಗಳ ಅಂತರದಲ್ಲಿ 2ನೇ ಪ್ರಶಸ್ತಿ ಗೆಲುವಿನ ಸಂಭ್ರಮ ಕಾಣುವ ಅವಕಾಶ ನಿಕಿ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net