ಬೆಂಗಳೂರು 10ಕೆ ಓಟಕ್ಕೆ ಅನ್ಯಾಂಗೋ

New-Project-1-6
Published on

ಬೆಂಗಳೂರು: ವಿಶ್ವದ ಎರಡನೇ ಅತಿ ವೇಗದ 10ಕೆ ಓಟಗಾರ್ತಿ ಎಂಮ್ಯಾಕ್ಯುಲೇಟ್ ಅನ್ಯಾಂಗೋ ಅಚೋಲ್ ಏಪ್ರಿಲ್ 28ರಂದು ನಡೆಯಲಿರುವ ವಿಶ್ವ 10ಕೆ ಬೆಂಗಳೂರು ಓಟದ 16ನೇ ಆವೃತ್ತಿಯಲ್ಲಿ ಭಾಗವಗಹಿಸಲಿದ್ದು, ಎಲೈಟ್ ಅಥ್ಲೀಟ್‌ಗಳ ಪೈಕಿ ಕೂಟದ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಅವರು 2019ರ ಆಫ್ರಿಕನ್ ಜೂನಿಯರ್ ಚಾಂಪಿಯನ್‌ಷಿಪ್‌ನ 3000 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ ಸಾಧಕಿಯಾಗಿದ್ದಾರೆ.

ಕೀನ್ಯಾದ ಲಿಲಿಯನ್ ರೆಂಗೆರುಕ್ ಕಸಾಯಿತ್, ಫೇಯ್ತ್ ಚೆಪ್‌ಕೋಚ್, ಲೊಯಿಸ್ ಚೆಮ್‌ನುಂಗ್, ಸಿಂಟಿಯಾ ಚೆಪ್‌ನ್‌ಜೆನೊ ಮತ್ತು ಗ್ರೇಸ್ ನವೊವುನಾ ಐವರು ಓಟಗಾರ್ತಿಯರು ರೇಸ್‌ನಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಈ ವರ್ಷದ ಮುಂಬೈ ಮ್ಯಾರಥಾನ್ ವಿಜೇತೆ, ಇಥಿಯೋಪಿಯಾದ ಅಬೆರಾಶ್ ಮಿನ್ಸೆವೊ ಮತ್ತು 2022ರ ವಿಶ್ವ ಒಳಾಂಗಣ 3000 ಮೀ ಓಟ ಚಾಂಪಿಯನ್ ಲೆಮ್ಲೆಮ್ ಹೈಲು ಕಾಣಿಸಿಕೊಳ್ಳಲಿದ್ದಾರೆ.

ಪುರುಷರ ಎಲೈಟ್ ವಿಭಾಗದಲ್ಲಿ ಕೀನ್ಯಾದ ಪೀಟರ್ ಮ್ವಾನಿಕಿ ಐಲಾ, ದೇಶ ಭಾಂದವ 2019ರ ಆಫ್ರಿಕನ್ ಜೂನಿಯರ್ ಚಾಂಪಿಯನ್ ಬ್ರಾವಿನ್ ಕಿಪ್ಕೊಗೆಯ್ ಕಿಪ್ಟೂ ಜತೆಗೆ ಹಿಲರಿ ಚೆಪ್ಕ್ವೊನಿ, ಪ್ಯಾಟ್ರಿಕ್ ಮೊಸಿನ್, ತಾಂಜಾನಿಯಾದ ಜಾನ್ ವೆಲೆ ಮತ್ತು ಇಥಿಯೋಪಿಯಾದ ಬೋಕಿ ಡಿರಿಬಾ ಪೈಪೋಟಿ ನೀಡಲಿದ್ದಾರೆ. ಪುರುಷರ ಹಾಗೂ ಮಹಿಳಾ ವಿಭಾಗದ ವಿಜೇತರಿಗೆ ತಲಾ ₹22 ಲಕ್ಷ ಬಹುಮಾನ ಮೊತ್ತ ನೀಡಲಾಗುವುದು, ಜತೆಗೆ ದಾಖಲೆ ನಿರ್ಮಿಸಿದ ಓಟಗಾರರಿಗೆ ಬೋನಸ್ ರೂಪದಲ್ಲಿ ₹7 ಲಕ್ಷ ದೊರೆಯಲಿದೆ. ವಿಶ್ವ 10ಕೆ ಬೆಂಗಳೂರು ಓಟ ಒಟ್ಟು 1.75 ಕೋಟಿ ರೂ.ಬಹುಮಾನ ಮೊತ್ತ ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net