

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ಆಜಾದ್ ನಿಧನರಾಗಿದ್ದಾರೆ.
ಕೀರ್ತಿ ಆಜಾದ್ ಅವರೇ ಸಾಮಾಜಿಕ ಜಾಲತಾಣ X ನಲ್ಲಿ, ಇಂದು ಮಧ್ಯಾಹ್ನ 12:40ಕ್ಕೆ ಪತ್ನಿ ಪೂನಂ ಝಾ ಆಜಾದ್ ಅವರು ಕೊನೆಯುಸಿರೆಳೆದಿದ್ದಾರೆ. ನನ್ನ ಪತ್ನಿ ಪೂನಂ ಇನ್ನಿಲ್ಲ. ಇಂದು ಮಧ್ಯಾಹ್ನ ಆಕೆ ಕೊನೆಯುಸಿರೆಳೆದಿದ್ದಾಳೆ. ಆಕೆಯ ಚೇತರಿಸಿಕೊಳ್ಳಲು ಪ್ರಾರ್ಥಿಸಿದವರಿಗೆ ನನ್ನ ಧನ್ಯವಾದಗಳು, ”ಎಂದು ಆಜಾದ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಪೂನಂ ಝಾ ಆಜಾದ್ ನಿಧನಕ್ಕೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಪೂನಂ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಅವರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ.
ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಕೀರ್ತಿ ಆಜಾದ್ ರಾಜಕೀಯ ಪ್ರವೇಶಿಸಿದರು. ಪ್ರಸ್ತುತ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದಾರೆ. 1983 ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್ ಅವರು ಭಾರತಕ್ಕಾಗಿ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡಿದರು ಮತ್ತು 135 ರನ್ ಗಳಿಸಿದರು. 25 ಏಕದಿನ ಪಂದ್ಯಗಳಲ್ಲಿ 269 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 142 ಪಂದ್ಯಗಳಲ್ಲಿ 6634 ರನ್ ಗಳಿಸಿ 234 ವಿಕೆಟ್ ಪಡೆದಿದ್ದಾರೆ.