ಕೋಚ್​ ಆಗಿ ರಾಹುಲ್​ಗಿಂದು ಕೊನೆಯ ದಿನ! ಮತ್ತೆ ಮುಂದುವರಿಯುತ್ತಾರಾ? ದ್ರಾವಿಡ್​ ಹೇಳಿದ್ದಿಷ್ಟು…

Rahul Dravid
Published on

ಅಹಮದಾಬಾದ್​: ಒಂದು ಬಾರಿಯಾದರೂ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಆಡುವುದೆಂದರೆ ಅದು ಅದೃಷ್ಟವೇ ಸರಿ. ಹೀಗಿರುವಾಗ ಎರಡನೇ ಬಾರಿ ವಿಶ್ವಕಪ್​ ಫೈನಲ್​ನಲ್ಲಿ ಯಾವುದಾದರೂ ಒಂದು ರೂಪದಲ್ಲಿ ತಂಡದ ಭಾಗವಾಗುವುದು ಅಂದರೆ, ಅದಕ್ಕಿಂತ ವಿಶೇಷ ಬೇರೆ ಏನಿದೆ ಹೇಳಿ.​ ಆ ಅದೃಷ್ಟ ಟೀಮ್​ ಇಂಡಿಯಾ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್​​ ಅವರ ಪಾಲಿಗೆ ಒದಗಿ ಬಂದರೂ ಎರಡರಲ್ಲೂ ನಿರಾಸೆ ಅನುಭವಿಸಿದ್ದು ಮಾತ್ರ ಬೇಸರದ ಸಂಗತಿಯಾಗಿದೆ. 2003ರಲ್ಲಿ ನಡೆದ ವಿಶ್ವಕಪ್​ ಫೈನಲ್​ನಲ್ಲಿ ತಂಡದ ಉಪನಾಯಕರಾಗಿದ್ದ ದ್ರಾವಿಡ್​, ಈ ಬಾರಿ ತಂಡದ ಮುಖ್ಯ ಕೋಚ್​ ಆಗಿದ್ದಾರೆ. ಮತ್ತೊಂದು ಬೇಸರದ ಸಂಗತಿ ಏನೆಂದರೆ, ಇಂದು ದ್ರಾವಿಡ್​​ ಅವರ ಕೆಲಸದ ಕೊನೆಯ ದಿನವಾಗಿದೆ.

ಕೋಚ್​ ಆಗಿ ದ್ರಾವಿಡ್​ ಮುಂದುವರಿಯುತ್ತಾರೋ ಇಲ್ಲವೋ ಖಚಿತವಾಗಿಲ್ಲ. ಆದರೆ, ಅವರ ಎರಡು ವರ್ಷಗಳ ಒಪ್ಪಂದ ನವೆಂಬರ್​ 20 ಅಂದರೆ, ಇಂದು ಕೊನೆಯಾಗುತ್ತದೆ. ನಿನ್ನೆ ಫೈನಲ್​ ಪಂದ್ಯದ ವೇಳೆ ದ್ರಾವಿಡ್​ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರು ಮಧ್ಯಾಹ್ನದ ಸುಮಾರಿಗೆ ಅಭಿಮಾನಿಗಳ ಝೇಂಕಾರದ ನಡುವೆ ಮೈದಾನಕ್ಕೆ ಕಾಲಿಟ್ಟವರಲ್ಲಿ ಮೊದಲಿಗರಾಗಿದ್ದರು. ನೇರವಾಗಿ ಪಿಚ್‌ಗೆ ನಡೆದ ಡ್ರಾವಿಡ್​ ತಮ್ಮ ಅಂಗೈಯಿಂದ ಒಂದು ತುದಿಯಿಂದ ಸ್ಪರ್ಶಿಸಿದರು. ಬಳಿಕ, ಇನ್ನೊಂದು ತುದಿಗೆ ನಡೆದು, ಕೆಳಗೆ ಬಾಗಿ ಪಿಚ್​ ಸ್ಪರ್ಶಿಸಿದರು. ಈ ಕ್ಷಣ ಭಾವುಕತೆಗೆ ಸಾಕ್ಷಿಯಾಗಿತ್ತು. ಇಡೀ ಟೂರ್ನಿಯಲ್ಲಿ ತಮ್ಮ ಸ್ನೇಹಶೀಲ ಕೋಚ್​ ಗುಣದಿಂದಾಗಿ ತಂಡದಲ್ಲಿ ದ್ರಾವಿಡ್​ ಎಲ್ಲ ಫೇವರಿಟ್​ ಆಗಿದ್ದಾರೆ.

ದ್ರಾವಿಡ್​ ಬಳಿಕ ನಾಯಕ ರೋಹಿತ್​ ಪಿಚ್ ಅನ್ನು ಪರಿಶೀಲಿಸಿ, ದ್ರಾವಿಡ್‌ ಬಳಿ ತೆರಳಿ ಕೆಲಕಾಲ ಮಾತನಾಡಿದರು. ಸಂಕ್ಷಿಪ್ತ ಸಂಭಾಷಣೆಯ ನಂತರ, ದ್ರಾವಿಡ್ ಅವರು ಅಭ್ಯಾಸದ ಪಿಚ್‌ಗಳಲ್ಲಿ ಸ್ಟಂಪ್‌ಗಳ ಹಿಂದೆ ತಮ್ಮ ಎಂದಿನ ಸ್ಥಾನದಲ್ಲಿ ನಿಂತಿದ್ದರಿಂದ ಇಬ್ಬರೂ ಬೇರ್ಪಟ್ಟರು. ತವರು ನೆಲದಲ್ಲಿ ಭಾರೀ ಪ್ರೇಕ್ಷಕರ ನಡುವೆ ತಮ್ಮ ಜೀವನದ ಅತಿದೊಡ್ಡ ಪಂದ್ಯದ ಮೊದಲು ತಮ್ಮ ಹುಡುಗರು ಅಂತಿಮ ಬಾರಿಗೆ ಅಭ್ಯಾಸದಲ್ಲಿ ತೊಡಗಿರುವುದನ್ನು ದ್ರಾವಿಡ್​ ವೀಕ್ಷಿಸಿದರು. ಭಾರೀ ನಿರೀಕ್ಷೆಯೊಂದಿಗೆ ನಿನ್ನೆ ಆಸಿಸ್​ ಎದುರು ಮೈದಾನಕ್ಕಿಳಿದ ದ್ರಾವಿಡ್​ ಪಡೆ ಸೋಲಿನೊಂದಿಗೆ ಭಾರೀ ನಿರಾಶೆಯನ್ನು ಮೂಡಿಸಿತು. ಒಂದು ವೇಳೆ ಭಾರತ ಫೈನಲ್​ನಲ್ಲಿ ಗೆದ್ದಿದ್ದರೆ ದ್ರಾವಿಡ್​ ವೃತ್ತಿ ಜೀವನದ ಸಾರ್ಥಕ ಕ್ಷಣಗಳಿಗೆ ನಿನ್ನೆಯ ದಿನ ಸಾಕ್ಷಿಯಾಗುತ್ತಿತ್ತು. ಈ ಬಾರಿ ದ್ರಾವಿಡ್​ಗಾಗಿ ವಿಶ್ವಕಪ್ ಗೆಲ್ಲಲು ಬಯಸಿದ್ದೇವೆ ಎಂದು ರೋಹಿತ್​ ಹೇಳಿದ್ದರು. ಆದರೆ, ಇದ್ಯಾವುದು ನೆರವೇರಲಿಲ್ಲ. ಕ್ರೀಡಾಭಿಮಾನಿಗಳು ಸೇರಿದಂತೆ ಎಲ್ಲರ ಮುಖದಲ್ಲಿ ನಿರಾಸೆಯ ಕಾರ್ಮೋಡ ಕವಿಯಿತು.

ಟೀಮ್​ ಇಂಡಿಯಾಗೆ ದ್ರಾವಿಡ್​ ಕೊಡುಗೆಯನ್ನು ಎಂದೂ ಮರೆಯುವಂತಿಲ್ಲ. ಶುಭಮಾನ್​ ಗಿಲ್ಲ, ಇಶಾನ್​ ಕಿಶಾನ್​, ಶ್ರೇಯಸ್​ ಅಯ್ಯರ್ ಮತ್ತು ಮೊಹಮ್ಮದ್​ ಸಿರಾಜ್​ ಎಲ್ಲರೂ ದ್ರಾವಿಡ್​ ಗರಡಿಯಲ್ಲಿ ತಯಾರಾದ ಹುಡುಗರು ಮತ್ತು ಭವಿಷ್ಯದ ಟೀಮ್​ ಇಂಡಿಯಾ ಸ್ಟಾರ್​ಗಳು.​ ದ್ರಾವಿಡ್​ ಅವರ ತರಬೇತಿ ಅಡಿಯಲ್ಲಿ ಅಂಡರ್​ 19 ವಿಶ್ವಕಪ್, ಭಾರತ ಎ ತಂಡಗಳಿಗೆ ಪ್ರವೇಶ ಪಡೆದ​ ಎಲ್ಲರೂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ರಿಷಭ್​ ಪಂತ್​, ಸರ್ಫರಾಜ್​ ಖಾನ್​, ವಾಸಿಂಗ್ಟನ್​ ಸುಂದನ್​, ಆವೇಶ್​ ಖಾನ್​ ಒಳಗೊಂಡ ಇಶಾನ್​ ಕಿಶಾನ್​ ನೇತೃತ್ವದ ಅಂಡರ್​ 19 ತಂಡಕ್ಕೂ ದ್ರಾವಿಡ್​ ಕೋಚ್​ ಆಗಿದ್ದರು. 2016ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ಸೋಲುಂಡಿತು. ಇದಾದ ಎರಡು ವರ್ಷಗಳ ಬಳಿಕ ಫೃಥ್ವಿ ಶಾ ನೇತೃತ್ವದಲ್ಲಿ ನ್ಯೂಜಿಲೆಂಡ್​ನಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ವಿಶ್ವಕಪ್​ ಗೆದ್ದಿತು. ದ್ರಾವಿಡ್‌ ಅವರ ಏಕೈಕ ಗುರಿಯು ಬಲಿಷ್ಠ ಭಾರತ ತಂಡದ ನಿರ್ಮಾಣವಾಗಿತ್ತು. ವಯಸ್ಸಿನ ವಂಚನೆಯು ಭಾರತೀಯ ಕ್ರಿಕೆಟ್ ಅನ್ನು ಕಾಡುತ್ತಿರುವ ದೊಡ್ಡ ಕಾಯಿಲೆ ಎಂದು ಗುರುತಿಸಿದ ನಂತರ ಕೇವಲ ಒಂದು ಅಂಡರ್-19 ವಿಶ್ವಕಪ್‌ನಲ್ಲಿ ಮಾತ್ರ ಆಟಗಾರ ಆಡಬಹುದು ಎಂಬ ನಿಯಮವನ್ನು 19 ವರ್ಷದೊಳಗಿನವರ ತರಬೇತುದಾರರಾಗಿ ದ್ರಾವಿಡ್​ ಮಾಡಿದರು.

ಅಂಡರ್​ 19 ತಂಡದ ಬಳಿಕ ಟೀಮ್​ ಇಂಡಿಯಾದ ಮುಖ್ಯ ತಂಡದ ಕೋಚ್​ ಆಗಿ ಆಯ್ಕೆಯಾದ ರಾಹುಲ್​ ಸಾಕಷ್ಟು ಸುಧಾರಣೆಯನ್ನು ತಂದರು. ಪ್ರಸಕ್ತ ಟೂರ್ನಿಯಲ್ಲಿ ಆಡಿದ 10 ಲೀಗ್​ ಪಂದ್ಯಗಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್​ಗೆ ಬಂದ ಭಾರತ ಕೊನೆಯಲ್ಲಿ ಮುಗ್ಗರಿಸಿತು. ಆದರೆ, ಅಲ್ಲಿಯವರೆಗೆ ಭಾರತ ಅಂದರೆ, ಎಲ್ಲರು ಭಯ ಬೀಳುತ್ತಿದ್ದರು. ಅಷ್ಟರ ಮಟ್ಟಿಗೆ ಟೀಮ್​ ಇಂಡಿಯಾ ಪ್ರದರ್ಶನ ನೀಡಿತ್ತು. ಇದಕ್ಕೆ ಮುಖ್ಯ ಕಾರಣಮ ದ್ರಾವಿಡ್​ ಅವರು ಎಂದು ಸ್ವತಃ ರೋಹಿತ್​ ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬೇಕು. ಏಕೆಂದರೆ, ಪ್ರತಿಯೊಬ್ಬ ಆಟಗಾರನಿಗೂ ತಮ್ಮದೇಯಾದ ಆಟ ಆಡಲು ದ್ರಾವಿಡ್​ ಅವರು ಸ್ವತಂತ್ರ ನೀಡಿದ್ದರು. ಆದರೆ, ಫೈನಲ್​ ಫಲಿತಾಂಶ ಏನೇ ಇರಬಹುದು ರಾಹುಲ್​ ಅವರ ಪಾತ್ರವನ್ನು ಮಾತ್ರ ಎಂದೂ ಮರೆಯುವಂತಿಲ್ಲ.

ಕೋಚ್​ ಆಗಿ ಮುಂದುವರಿಯುತ್ತಾರಾ?

ಇಂದು ರಾಹುಲ್​ ಅವರ ಒಪ್ಪಂದ ಕೊನೆಯಾಗಲಿದ್ದು, ಈ ಬಗ್ಗೆ ದ್ರಾವಿಡ್​ ಪ್ರತಿಕ್ರಿಯೆ ನೀಡಿದ್ದಾರೆ. ಮುಂದುವರಿಯುವ ಬಗ್ಗೆ ನಾನಿನ್ನೂ ಯೋಚನೆ ಮಾಡಿಲ್ಲ. ನಾನು ಸಂಪೂರ್ಣ ವಿಶ್ವಕಪ್​ ಸರಣಿಯಲ್ಲಿ ತೊಡಗಿಸಿಕೊಂಡಿದ್ದೆ. ಇದರಿಂದ ಭವಿಷ್ಯದ ಬಗ್ಗೆ ಯೋಚಿಸಲು ನನಗೆ ಸಮಯ ಸಿಕ್ಕಿರಲಿಲ್ಲ. ಇನ್ನು ಮುಂದೆ ಆ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ದ್ರಾವಿಡ್​ ಹೇಳಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು.

ಆರನೇ ವಿಶ್ವಕಪ್​ ಗೆಲುವು

ಏಕದಿನ ವಿಶ್ವಕಪ್‌ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿ ವಿಶ್ವಕಪ್​ ಗೆಲುವು ಸಂಭ್ರಮಿಸುತ್ತಿದೆ. 1987, 1999, 2003, 2007, 2015 ಮತ್ತು ಇದೀಗ 2023 ಅಲ್ಲಿಗೆ ಒಟ್ಟು ಆರು ಬಾರಿ ಆಸ್ಟ್ರೇಲಿಯಾ ವಿಶ್ವಕಪ್​ ಗೆದ್ದಂತಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net