

ನವದೆಹಲಿ: ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಬಹುತೇಕ ಇಡೀ ದೇಶವನ್ನೇ ಕುತೂಹಲದಲ್ಲಿ ಇರಿಸಿತ್ತು. ಅದರಲ್ಲೂ ಈ ಫೈನಲ್ ಪಂದ್ಯ ದಾಖಲೆಮಟ್ಟದಲ್ಲಿ ವೀಕ್ಷಣೆ ಆಗಿರುವುದು ಕೂಡ ಕಂಡುಬಂದಿದೆ.
ವಿಶೇಷವೆಂದರೆ ಡಿಸ್ನಿ-ಹಾಟ್ಸ್ಟಾರ್ನಲ್ಲಿ ಬಿತ್ತರಗೊಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಅಂತಿಮ ಹಣಾಹಣಿಯ ಆಟಕ್ಕೆ ಪೀಕ್ ವೀವರ್ಶಿಪ್ 5.9 ಕೋಟಿ ಆಗಿದ್ದು, ಈ ಮೂಲಕ ಇದು ಹಳೆಯ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ. ಫೈನಲ್ ಮಾತ್ರವಲ್ಲದೆ ಈ ಪಂದ್ಯಾವಳಿಯ ಇತರ ಪಂದ್ಯಗಳೂ ಅತ್ಯಧಿಕ ವೀಕ್ಷಣೆ ಕಂಡಿವೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.
ಮತ್ತೊಂದೆಡೆ ಅಹಮದಾಬಾದ್ನ ಕ್ರೀಡಾಂಗಣದಲ್ಲೇ 1.3 ಲಕ್ಷ ಮಂದಿ ನೇರವಾಗಿ ಪಂದ್ಯ ವೀಕ್ಷಿಸಿದ್ದಾರೆ. ಇದಕ್ಕೆ ಹೊರತಾಗಿ ದೇಶದ ವಿವಿಧ ನಗರಗಳ ಪಿವಿಆರ್ ಇನಾಕ್ಸ್ನ 150 ಸಿನಿಮಾ ಮಂದಿರಗಳಲ್ಲಿ 70 ಸಾವಿರಕ್ಕೂ ಅಧಿಕ ಟಿಕೆಟ್ಗಳು ಮಾರಾಟವಾಗಿವೆ. ಮಾತ್ರವಲ್ಲದೆ, ಕರ್ನಾಟಕ ಸರ್ಕಾರದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ದೊಡ್ಡ ಪರದೆಯಲ್ಲಿ ಕ್ರಿಕೆಟ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಭಾರತ ಮತ್ತು ನ್ಯೂಜಿಲೆಂಡ್ನ ಸೆಮಿಫೈನಲ್ನಲ್ಲೂ ಡಿಸ್ನಿ ಹಾಟ್ಸ್ಟಾರ್ನಲ್ಲಿ ಪೀಕ್ ಕನ್ಕರೆನ್ಸಿ 5.3 ಕೋಟಿ ವೀವರ್ಶಿಪ್ ದಾಖಲೆ ಮಾಡಿತ್ತು. ಲೈವ್ ಸ್ಟ್ರೀಮ್ ಆಗುವಾಗಿನ ಗರಿಷ್ಠ ಸಂಖ್ಯೆಯ ವೀಕ್ಷಕರನ್ನು ಹೊಂದಿರುವುದನ್ನು ಪೀಕ್ ಕನ್ಕರೆನ್ಸಿ ಎನ್ನಲಾಗುತ್ತದೆ.