ಬೆನ್ ಸ್ಟೋಕ್ಸ್ ವಿಸ್ಡನ್ ವರ್ಷದ ಕ್ರಿಕೆಟಿಗ: ಮಹಿಳೆಯರಲ್ಲಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿಗೆ ಗೌರವ

Stokes
Published on

ಲಂಡನ್: ಕಳೆದ 3 ವರ್ಷಗಳಿಂದ ವಿಸ್ಡನ್ ವರ್ಷದ ಕ್ರಿಕೆಟಿಗ ಗೌರವಕ್ಕೆ ಭಾಜನರಾಗುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಾಬಲ್ಯಕ್ಕೆ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸೆಡ್ಡು ಹೊಡೆದಿದ್ದಾರೆ. ವಿಸ್ಡನ್ ಕ್ರಿಕೆಟರ್ಸ್ ಆಲ್ಮನಾಕ್ 2020ರ ಆವೃತ್ತಿಯ ವಿಶ್ವದ ಅಗ್ರ ಕ್ರಿಕೆಟಿಗನಾಗಿ ಬೆನ್ ಸ್ಟೋಕ್ಸ್ ಗೌರವ ಪಡೆದಿದ್ದಾರೆ. 2019ರ ವಿಶ್ವಕಪ್​ನಲ್ಲಿ ತೋರಿದ ಅಮೋಘ ನಿರ್ವಹಣೆ ಮತ್ತು ಆಶಸ್ ಸರಣಿಯ ಹೆಡಿಂಗ್ಲೆ ಟೆಸ್ಟ್​ನಲ್ಲಿ ಆಡಿದ ಶ್ರೇಷ್ಠ ಇನಿಂಗ್ಸ್​ಗಾಗಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಸ್ಟೋಕ್ಸ್ 2005ರ ಬಳಿಕ ಈ ಗೌರವ ಪಡೆದ ಮೊದಲ ಇಂಗ್ಲೆಂಡ್ ಆಟಗಾರ ಎನಿಸಿದ್ದಾರೆ.

ಆಂಡ್ರೊ್ಯೕ ಫ್ಲಿಂಟಾಫ್ ಕೊನೆಯದಾಗಿ ಈ ಗೌರವ ಪಡೆದ ಇಂಗ್ಲಿಷ್ ಕ್ರಿಕೆಟಿಗರಾಗಿದ್ದಾರೆ. ‘ಬೆನ್ ಸ್ಟೋಕ್ಸ್ ಕಳೆದ ವರ್ಷ ಕೆಲವೇ ವಾರಗಳ ಅಂತರದಲ್ಲಿ ಎರಡು ಜೀವನಶ್ರೇಷ್ಠ ಇನಿಂಗ್ಸ್​ಗಳನ್ನು ಆಡಿದರು. ಮೊದಲ ಇನಿಂಗ್ಸ್ ಉತ್ತಮ ಪ್ರತಿಭೆ ಮತ್ತು ಅದೃಷ್ಟದಿಂದ ಕೂಡಿತ್ತು. ಈ ಮೂಲಕ ಅವರು ವಿಶ್ವಕಪ್ ಫೈನಲ್​ನಲ್ಲಿ ಇಂಗ್ಲೆಂಡ್​ನ ರನ್ ಚೇಸಿಂಗ್​ಗೆ ಬಲ ತುಂಬಿದರು. ಬಳಿಕ ಆಶಸ್ ಸರಣಿಯ 3ನೇ ಟೆಸ್ಟ್ ನಲ್ಲಿ ಅಜೇಯ 135 ರನ್​ಗಳ ಇನಿಂಗ್ಸ್ ಮೂಲಕ ಇಂಗ್ಲೆಂಡ್​ಗೆ 1 ವಿಕೆಟ್ ಗೆಲುವು ತಂದುಕೊಟ್ಟರು’ ಎಂದು ವಿಸ್ಡನ್ ಸಂಪಾದಕ ಲಾರೆನ್ಸ್ ಬೂತ್ ಅಭಿಪ್ರಾಯಪಟ್ಟಿದ್ದಾರೆ. ವೆಸ್ಟ್ ಇಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ ವರ್ಷದ ಟಿ20 ಆಟಗಾರ ಗೌರವ ಸಂಪಾದಿಸಿದ್ದಾರೆ.

ಮಹಿಳೆಯರಲ್ಲಿ ಪೆರ್ರಿಗೆ ಗೌರವ: ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಮಹಿಳೆಯರ ವಿಭಾಗದಲ್ಲಿ ಈ ಗೌರವ ಪಡೆದಿದ್ದಾರೆ. ಈ ಮುನ್ನ 2016ರಲ್ಲೂ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು. ಜತೆಗೆ ಈ ಬಾರಿ ಅವರು ವಿಸ್ಡನ್ ವರ್ಷದ ಐವರು ಕ್ರಿಕೆಟಿಗರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ವಿಸ್ಡನ್ ಅಲ್ಮನಾಕ್ ಈ ಗೌರವವನ್ನು 1889ರಿಂದಲೂ ನೀಡುತ್ತ ಬಂದಿದೆ. ಅವರು ಈ ಗೌರವವನ್ನು ಪಡೆದಿರುವ ಕೇವಲ 7ನೇ ಮಹಿಳಾ ಕ್ರಿಕೆಟರ್ ಮತ್ತು ಮೊದಲ ವಿದೇಶಿ ಮಹಿಳಾ ಕ್ರಿಕೆಟರ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net